ಕೊಪ್ಪಳ: ನಾಳೆಯಿಂದ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರುವ ಹಿನ್ನೆಲೆ ಸಮೀಕ್ಷೆಯಲ್ಲಿ ಸಮಾಜದ ನಡೆ ಕುರಿತು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗಳು ಜಾಗೃತಿ ಮೂಡಿಸಿದರು.
ಕೊಪ್ಪಳದ ಪಲ್ಲೇದವರ ಓಣಿಯಲ್ಲಿ ವಚನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸಲಾಯಿತು. ಈ ವೇಳೆ ಮಾಜಿ ಸಂಸದ ಸಂಗಣ್ಣ ಕರಡಿ. ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಬಸವರಾಜ ಕ್ಯಾವಟರ ಸೇರಿ ಹಲವರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ವಚನಾನಂದ ಸ್ವಾಮೀಜಿ ಹುಬ್ಬಳ್ಳಿಯಲ್ಲಿ ನಡೆದಿರುವುದು ಏಕತಾ ಸಮಾವೇಶವಲ್ಲ, ಇದು ಕೇವಲ ವೀರಶೈವ ಲಿಂಗಾಯತರ ಸಮಾವೇಶ, ಲಕ್ಷ ಲಕ್ಷ ಜನ ಬರುತ್ತಾರೆ ಎಂದಿದ್ದರು ಆದರೆ ಬಂದಿದ್ದು 7 ಸಾವಿರ ಜನ ಮಾತ್ರ, ಹೀಗಾಗಿ ಈ ಸಮಾವೇಶ ವಿಫಲವಾಗಿದೆ. ಕೇವಲ ರಾಜಕೀಯಕ್ಕಾಗಿ ಸಮಾವೇಶ ಮಾಡಲಾಗಿದೆ ಎಂದು ವಚನಾನಂದ ಸ್ವಾಮೀಜಿ ಹೇಳಿದರು.
ಸಮೀಕ್ಷೆ ಮಾಡುವುದಕ್ಕೆ ನಮ್ಮ ಸ್ವಾಗತವಿದೆ ಆದರೆ, ತರಾತುರಿಯಲ್ಲಿ ಸಮೀಕ್ಷೆ ಮಾಡುವುದು ಸರಿ ಅಲ್ಲ. ಹಬ್ಬದ ಸಂದರ್ಭದಲ್ಲಿ ಸಮೀಕ್ಷೆ ಮಾಡುವುದನ್ನು ಮುಂದೂಡಬೇಕು. ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ಅನೇಕ ಗೊಂದಲಗಳಿವೆ. ಈ ಗೊಂದಲ ನಿವಾರಣೆ ಮಾಡಿ ಸಮೀಕ್ಷೆ ಮಾಡಬೇಕು. ಇಲ್ಲದಿದ್ದರೆ ಮತ್ತೆ ಗೊಂದಲವಾಗುತ್ತದೆ. ಪಂಚಮಸಾಲಿಗಳು ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಬರೆಸಿ ಎಂದು ವಚನಾನಂದ ಸ್ವಾಮೀಜಿ ಕರೆ ನೀಡಿದರು



















