ಬೆಂಗಳೂರು: ಇತ್ತೀಚೇನ ದಿನಗಳಲ್ಲಿ ಸೈಬರ್ ವಂಚಕರ ಕಾಟ ಹೆಚ್ಚಾಗುತ್ತಲೇ ಇದೆ, ವಂಚಕರ ಆಟಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ಐಎಎಸ್ ಅಧಿಕಾರಿ ಮೇಜರ್ ಮಣಿವಣ್ಣನ್ ಹೆಸರಿನಲ್ಲೂ ವಂಚಕರು ನಕಲಿ ಫೇಸ್ಬುಕ್ ಖಾತೆ ತೆರೆದಿದ್ದಾರೆ. ಕಳೆದ 9 ತಿಂಗಳಿನಲ್ಲಿ 2ನೇ ಬಾರಿ ಪೊಲೀಸರಿಗೆ ಮಣಿವಣ್ಣನ್ ದೂರು ನೀಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಮೇಜರ್ ಪಿ. ಮಣಿವಣ್ಣನ್ ಫೋಟೋ ಬಳಸಿಕೊಂಡು ಖದೀಮರು ನಕಲಿ ಖಾತೆ ತೆರೆದಿದ್ದಾರೆ. ಫರ್ನಿಚರ್ ಮಾರಾಟದ ಹೆಸರಿನಲ್ಲಿ ಮೆಸೇಜ್ ಮಾಡಿದ್ದು, ನಮ್ಮ ಸ್ನೇಹಿತರು ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ವರ್ಗಾವಣೆ ಆಗುತ್ತಿದ್ದಾರೆ ಹೀಗಾಗಿ ಫರ್ನಿಚರ್ ಮಾರಾಟ ಮಾಡುತ್ತಿದ್ದಾರೆ. ನಾನು ನೋಡಿದ್ದೇನೆ, ಬೇಕಾದರೆ ನೀವು ಖರೀದಿಸಬಹುದು ಎಂದು ಮೆಸೇಜ್ ಮಾಡಿದ್ದಾರೆ. ಅಲ್ಲದೇ ಹೀಗೆ ಇಬ್ಬರು ವ್ಯಕ್ತಿಗಳಿಗೆ ಮೆಸೇಜ್ ಕಳುಹಿಸಿ ವಂಚನೆ ಕೂಡ ಮಾಡಿದ್ದಾರೆ ಎಂದು ಮಣಿವಣ್ಣನ್ ಆರೋಪಿಸಿದ್ದಾರೆ.
ಕಳೆದ 9 ತಿಂಗಳ ಹಿಂದೆ ಕೂಡ ಖದೀಮರು ನಕಲಿ ಖಾತೆ ತೆರೆದಿದ್ದರು. ಈ ಬಗ್ಗೆ ಮಣಿವಣ್ಣನ್ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಂದ ಯಾವುದೇ ಕ್ರಮವೂ ಆಗಿರಲಿಲ್ಲ. ಈ ಹಿಂದೆ ಕೇಸ್ ದಾಖಲಾಗುತ್ತಿದ್ದಂತೆ ಅಕೌಂಟ್ ಡಿಆ್ಯಕ್ಟಿವ್ ಮಾಡಿದ್ದರು. ಆದರೆ ಈಗ ಮತ್ತೆ ಅಕೌಂಟ್ ಆ್ಯಕ್ಟಿವ್ ಮಾಡಿ ವಂಚನೆ ಮಾಡುತ್ತಿದ್ದಾರೆಂದು ಮಣಿವಣ್ಣನ್ ತಿಳಿಸಿದ್ದಾರೆ. ಆರೋಪಿಗಳ ಪತ್ತೆ ಮಾಡಿ ಅಕೌಂಟ್ ಡಿಆ್ಯಕ್ಟಿವೇಟ್ ಮಾಡುವಂತೆ ಪೊಲೀಸರಲ್ಲಿ ಮಣಿವಣ್ಣನ್ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಪ್ರಕರಣ ಸಂಬಂಧ ಬೆಂಗಳೂರು ಸೆಂಟ್ರಲ್ ಸೈಬರ್ ಕ್ರೈಮ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ