ಬೆಂಗಳೂರು ದಕ್ಷಿಣ ಜಿಲ್ಲೆ: 19 ವರ್ಷದ ಯುವಕನನ್ನು ವಿವಾಹವಾದ ಹಿನ್ನೆಲೆ ಯುವತಿಯ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಕುದೂರುನಲ್ಲಿ ನಡೆದಿದೆ.
19 ವರ್ಷದ ಯುವತಿ ಸೌಮ್ಯಾ 19 ವರ್ಷದ ಯುವಕ ವಸಂತ್ ಕುಮಾರ್‌ನನ್ನು ವಿವಾಹವಾಗಿದ್ದರು.
ಬಾಲ್ಯವಿವಾಹ ನಿಷೇಧ ಕಾಯಿದೆ-2006ರಡಿ ಯುವತಿಗೆ 18 ವರ್ಷ, ಯುವಕನಿಗೆ 21 ವರ್ಷ ತುಂಬಿರಬೇಕು. ಆದರೆ 19 ವರ್ಷದ ಯುವಕನನ್ನು ವಿವಾಹವಾದ ಹಿನ್ನೆಲೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೂರು ಆಧರಿಸಿ ಎಫ್‌ಐಆರ್ ದಾಖಲಾಗಿದೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸೋಮನತ್ತನಹಳ್ಳಿ ಗ್ರಾಮದ ಸೌಮ್ಯಾ ಹಾಗೂ ಚನ್ನರಾಯಪಟ್ಟಣದ ಅನೇಕೆರೆ ಗ್ರಾಮದ ವಸಂತ ಕುಮಾರ್ ಅಕ್ಕ-ಪಕ್ಕದ ಗ್ರಾಮದವರು. ಇಬ್ಬರು ಪರಸ್ಪರ ಪ್ರೀತಿಸಿ, ಜುಲೈ 11ರಂದು ಮಾಗಡಿ ತಾಲೂಕಿನ ಆಲೂರು ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ವಿವಾಹವಾಗಿದ್ದರು.
ಯುವತಿ ಮನೆಯವರ ವಿರೋಧದ ನಡುವೆಯೇ ಇಬ್ಬರೂ ವಿವಾಹವಾಗಿದ್ದರು. ಈ ಬಗ್ಗೆ ಹಾಸನ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಮಾಹಿತಿ ದೊರೆಕಿದ ತಕ್ಷಣವೇ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ನಿಟ್ಟಿನಲ್ಲಿ ದಾಖಲೆಗಳ ಪರಿಶೀಲನೆ ವೇಳೆ ವಿವಾಹವಾಗಿರುವುದು ಖಚಿತವಾಗಿದೆ. ಈ ಸಂಬಂಧ ಯುವತಿಯ ವಿರುದ್ಧ ಕುದೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.