ಅಮೃತಸರ: 75 ವರ್ಷದ ಎನ್‌ಆರ್‌ಐ ವ್ಯಕ್ತಿಯನ್ನು ಮದುವೆಯಾಗಲು ಅಮೆರಿಕದಿಂದ ಪಂಜಾಬ್‌ಗೆ ಬಂದಿದ್ದ 71 ವರ್ಷದ ಭಾರತೀಯ ಮೂಲದ ಅಮೆರಿಕನ್ ಪ್ರಜೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಪಂಜಾಬ್‌ನ ಲುಧಿಯಾನದಲ್ಲಿ ನಡೆದಿದೆ. ಜುಲೈನಲ್ಲಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮದುವೆಯಾಗಬೇಕಿದ್ದ ವರನೇ ಈ ಕೃತ್ಯದ ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೆರಿಕದ ಸಿಯಾಟಲ್ ನಿವಾಸಿ ರುಪಿಂದರ್ ಕೌರ್ ಪಂಧೇರ್ (71) ಅವರನ್ನು, ಮೂಲತಃ ಲುಧಿಯಾನದವರಾದ ಮತ್ತು ಇಂಗ್ಲೆಂಡ್‌ನಲ್ಲಿ ವಾಸಿಸುತ್ತಿದ್ದ ಅನಿವಾಸಿ ಭಾರತೀಯ ಚರಂಜಿತ್ ಸಿಂಗ್ ಗ್ರೆವಾಲ್ (75) ಮದುವೆಯಾಗಲು ಭಾರತಕ್ಕೆ ಆಹ್ವಾನಿಸಿದ್ದ. ಆತನ ಆಹ್ವಾನದ ಮೇರೆಗೆ ಬಂದ ರುಪಿಂದರ್ ಅವರನ್ನು ಗ್ರೆವಾಲ್‌ನ ಸೂಚನೆಯಂತೆಯೇ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಜುಲೈ 24ರಂದು ರುಪಿಂದರ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆದಾಗ, ಅವರ ಸಹೋದರಿ ಕಮಲ್ ಕೌರ್ ಖೈರಾ ಅವರಿಗೆ ಅನುಮಾನ ಬಂದಿದೆ. ಜುಲೈ 28ರ ವೇಳೆಗೆ ಅವರು ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ಮಾಹಿತಿ ನೀಡಿದರು. ರಾಯಭಾರ ಕಚೇರಿಯು ಸ್ಥಳೀಯ ಪೊಲೀಸರ ಮೇಲೆ ಒತ್ತಡ ಹೇರಿ ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿತು. ಕಳೆದ ವಾರವಷ್ಟೇ ರುಪಿಂದರ್ ಹತ್ಯೆಯಾಗಿರುವ ಸುದ್ದಿ ಅವರ ಕುಟುಂಬಕ್ಕೆ ತಿಳಿಯಿತು.
ಆರೋಪಿಯ ಬಂಧನ ಮತ್ತು ತನಿಖೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಖ್‌ಜೀತ್ ಸಿಂಗ್ ಸೋನು ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ, ಗ್ರೆವಾಲ್‌ನ ಸೂಚನೆಯಂತೆ ತಾನು ರುಪಿಂದರ್ ಅವರನ್ನು ತನ್ನ ಮನೆಯಲ್ಲಿ ಕೊಂದು, ಶವವನ್ನು ಸ್ಟೋರ್‌ರೂಮ್‌ನಲ್ಲಿ ಸುಟ್ಟುಹಾಕಿರುವುದಾಗಿ ಸೋನು ಒಪ್ಪಿಕೊಂಡಿದ್ದಾನೆ. ಈ ಕೃತ್ಯಕ್ಕಾಗಿ ಗ್ರೆವಾಲ್ ತನಗೆ 50 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದಾಗಿಯೂ ಆತ ಬಾಯ್ಬಿಟ್ಟಿದ್ದಾನೆ. ರುಪಿಂದರ್ ಅವರು ಭಾರತಕ್ಕೆ ಬರುವ ಮುನ್ನ ಗ್ರೆವಾಲ್‌ಗೆ ದೊಡ್ಡ ಮೊತ್ತದ ಹಣವನ್ನು ವರ್ಗಾಯಿಸಿದ್ದು, ಹಣಕಾಸಿನ ವಿಚಾರವೇ ಈ ಕೊಲೆಗೆ ಪ್ರಮುಖ ಕಾರಣವೆಂದು ಶಂಕಿಸಲಾಗಿದೆ.
ಪ್ರಮುಖ ಆರೋಪಿ ಗ್ರೆವಾಲ್ ತಲೆಮರೆಸಿಕೊಂಡಿದ್ದು, ಆತನನ್ನು ಆರೋಪಿಯೆಂದು ಹೆಸರಿಸಲಾಗಿದೆ ಎಂದು ಲುಧಿಯಾನ ಪೊಲೀಸ್ ರೇಂಜ್‌ನ ಡಿಐಜಿ ಸತಿಂದರ್ ಸಿಂಗ್ ಖಚಿತಪಡಿಸಿದ್ದಾರೆ. ಸೋನು ನೀಡಿದ ಮಾಹಿತಿಯ ಆಧಾರದ ಮೇಲೆ ಸಂತ್ರಸ್ತೆಯ ಅಸ್ಥಿಪಂಜರದ ಅವಶೇಷಗಳು ಮತ್ತು ಇತರ ಸಾಕ್ಷ್ಯಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.



















