ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಪ್ರಯುಕ್ತ, ಅವರ ಜೀವನ ಚರಿತ್ರೆಯನ್ನು ಆಧರಿಸಿದ ‘ಮಾ ವಂದೇ’ ಎಂಬ ಮಹತ್ವದ ಚಲನಚಿತ್ರವನ್ನು ಸಿಲ್ವರ್ ಕ್ಯಾಸ್ಟ್ ಕ್ರಿಯೇಷನ್ಸ್ ಘೋಷಿಸಿದೆ. ಇತ್ತೀಚೆಗೆ ‘ಮಾರ್ಕೋ’ ಚಿತ್ರದ ಮೂಲಕ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ ಮಲಯಾಳಂ ನಟ ಉನ್ನಿ ಮುಕುಂದನ್ ಅವರು ಪ್ರಧಾನಿ ಮೋದಿ ಅವರ ಪಾತ್ರದಲ್ಲಿ ನಟಿಸಲಿದ್ದಾರೆ.

ಚಿತ್ರದ ಕಥಾಹಂದರ
‘ಮಾ ವಂದೇ’ ಚಿತ್ರವು ಪ್ರಧಾನಿ ಮೋದಿಯವರ ಬಾಲ್ಯದಿಂದ ಹಿಡಿದು ರಾಷ್ಟ್ರ ನಾಯಕರಾಗಿ ಅವರು ಬೆಳೆದ ಅಸಾಧಾರಣ ಪಯಣವನ್ನು ತೆರೆಯ ಮುಂದೆ ತೆರೆದಿಡಲಿದೆ. ವಿಶೇಷವಾಗಿ, ಅವರ ಜೀವನದುದ್ದಕ್ಕೂ ಅಚಲ ಸ್ಫೂರ್ತಿಯಾಗಿದ್ದ ಅವರ ತಾಯಿ ಹೀರಾಬೆನ್ ಮೋದಿ ಅವರೊಂದಿಗಿನ ಆಳವಾದ ಬಾಂಧವ್ಯವನ್ನು ಈ ಚಿತ್ರವು ಪ್ರಮುಖವಾಗಿ ಬಿಂಬಿಸಲಿದೆ.
ಕ್ರಾಂತಿ ಕುಮಾರ್ ಸಿ.ಹೆಚ್. ನಿರ್ದೇಶನದ ಈ ಚಿತ್ರವನ್ನು ವೀರ್ ರೆಡ್ಡಿ ಎಂ. ಅವರು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಅತ್ಯಾಧುನಿಕ ವಿಎಫ್‌ಎಕ್ಸ್ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದೊಂದಿಗೆ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ.
ಭಾರತೀಯ ಚಿತ್ರರಂಗದ ಖ್ಯಾತ ತಂತ್ರಜ್ಞರು ಈ ಚಿತ್ರಕ್ಕಾಗಿ ಒಂದಾಗಿದ್ದಾರೆ:
ಛಾಯಾಗ್ರಹಣ: ‘ಬಾಹುಬಲಿ’ ಮತ್ತು ‘ಈಗ’ ಖ್ಯಾತಿಯ ಕೆ.ಕೆ. ಸೆಂಥಿಲ್ ಕುಮಾರ್.
ಸಂಗೀತ: ‘ಕೆಜಿಎಫ್’ ಮತ್ತು ‘ಸಲಾರ್’ ಖ್ಯಾತಿಯ ರವಿ ಬಸ್ರೂರ್.
ಎಡಿಟಿಂಗ್: ರಾಷ್ಟ್ರ ಪ್ರಶಸ್ತಿ ವಿಜೇತ ಶ್ರೀಕರ್ ಪ್ರಸಾದ್.
ಪ್ರೊಡಕ್ಷನ್ ಡಿಸೈನ್: ಖ್ಯಾತ ಕಲಾ ನಿರ್ದೇಶಕ ಸಾಬು ಸಿರಿಲ್.
ಸಾಹಸ ನಿರ್ದೇಶನ: ಕಿಂಗ್ ಸೊಲೊಮನ್.
ಪ್ಯಾನ್-ಇಂಡಿಯಾ ಬಿಡುಗಡೆ
‘ಮಾ ವಂದೇ’ ಚಿತ್ರವು ಇಂಗ್ಲಿಷ್ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಜೀವನ ಮತ್ತು ನಾಯಕತ್ವದ ಸ್ಫೂರ್ತಿದಾಯಕ ಪರಂಪರೆಯನ್ನು ಸೆರೆಹಿಡಿಯುವ ಅವಿಸ್ಮರಣೀಯ ಅನುಭವವನ್ನು ಇದು ನೀಡುವುದಾಗಿ ಚಿತ್ರತಂಡ ಹೇಳಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ಇನ್ನೂ ಪ್ರಕಟವಾಗಿಲ್ಲ.
ಈ ಹಿಂದೆ 2019ರಲ್ಲಿ ‘ಪಿಎಂ ನರೇಂದ್ರ ಮೋದಿ’ ಎಂಬ ಬಯೋಪಿಕ್ ತೆರೆಕಂಡಿತ್ತು, ಅದರಲ್ಲಿ ನಟ ವಿವೇಕ್ ಒಬೆರಾಯ್ ಅವರು ಪ್ರಧಾನಿ ಮೋದಿ ಪಾತ್ರದಲ್ಲಿ ನಟಿಸಿದ್ದರು.



















