ನವದೆಹಲಿ: ಏಷ್ಯಾ ಕಪ್ 2025ರ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ತಂಡವು ಹೀನಾಯ ಸೋಲು ಅನುಭವಿಸಿದ ನಂತರ, ಪಾಕ್ ಕ್ರೀಡಾ ವಲಯದಲ್ಲಿ ಟೀಕೆಗಳ ಸುರಿಮಳೆಯೇ ಆಗಿದೆ. ಅದರಲ್ಲೂ, ಅನುಭವಿ ಆಟಗಾರರಾದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರನ್ನು ತಂಡದಿಂದ ಕೈಬಿಟ್ಟಿದ್ದೇ ಸೋಲಿಗೆ ಕಾರಣ ಎಂದು ಹಲವು ಮಾಜಿ ಆಟಗಾರರು ದೂರುತ್ತಿದ್ದಾರೆ. ಈ ಟೀಕೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಅಮೀರ್, ಯುವ ಆಟಗಾರರ ಬೆಂಬಲಕ್ಕೆ ನಿಂತಿದ್ದು, ಟೀಕಾಕಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಏನಿದು ವಿವಾದ?
ದುಬೈನಲ್ಲಿ ನಡೆದ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನವು ಕೇವಲ 127 ರನ್‌ಗಳಿಗೆ ಕುಸಿದಿತ್ತು. ಈ ಸುಲಭ ಗುರಿಯನ್ನು ಭಾರತವು ಕೇವಲ 15.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಬೆನ್ನಟ್ಟಿ, 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. 2026ರ ಟ್ವೆಂಟಿ20 ವಿಶ್ವಕಪ್‌ಗೆ ಯುವ ತಂಡವನ್ನು ಕಟ್ಟುವ ಭಾಗವಾಗಿ, ಏಷ್ಯಾ ಕಪ್‌ಗೆ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರಂತಹ ಅನುಭವಿಗಳನ್ನು ಆಯ್ಕೆ ಮಾಡಿರಲಿಲ್ಲ. ಈ ನಿರ್ಧಾರವೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.
ಟೀಕಾಕಾರರ ವಿರುದ್ಧ ಅಮೀರ್ ಗರಂ
‘ಎಕ್ಸ್’ (ಹಿಂದಿನ ಟ್ವಿಟರ್) ಖಾತೆಯಲ್ಲಿ ಟೀಕಾಕಾರರಿಗೆ ಖಡಕ್ ಉತ್ತರ ನೀಡಿರುವ ಮೊಹಮ್ಮದ್ ಅಮೀರ್, “ನಾನು ಕೆಲವು ಜನರನ್ನು ನೋಡುತ್ತಿದ್ದೇನೆ, ಅವರು ತಮ್ಮದೇ ಆದ ಕಾರ್ಯಸೂಚಿಯನ್ನು ಹಿಡಿದು ಕುಳಿತಿದ್ದಾರೆ. ಈ ಆಟಗಾರನನ್ನು ಯಾಕೆ ತಂಡಕ್ಕೆ ತಂದಿದ್ದೀರಿ, ಅವನು ಅವನಿಗೆ ಸರಿಸಾಟಿಯಾಗಬಲ್ಲನೇ? ಎಂದು ಪ್ರಶ್ನಿಸುತ್ತಿದ್ದಾರೆ. ಅಂದರೆ, ಪಾಕಿಸ್ತಾನ ಒಂದು ಪಂದ್ಯ ಸೋಲಲಿ ಎಂದು ಇವರು ಕಾಯುತ್ತಿದ್ದರು, ಆಮೇಲೆ ಈ ಯುವಕರ ಹಿಂದೆ ಬೀಳಬಹುದು ಎಂದು” ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಅವರು ಐದಾರು ವರ್ಷ ಆಡಿ ಏನು ಸಾಧನೆ ಮಾಡಿದ್ದಾರೆ?’
ಬಾಬರ್ ಮತ್ತು ರಿಜ್ವಾನ್ ಅನುಪಸ್ಥಿತಿಯ ಬಗ್ಗೆ ಮಾತನಾಡಿದ ಅಮೀರ್, “ನೀವು ಯಾವ ಆಟಗಾರರ ಹೆಸರನ್ನು ಹೇಳುತ್ತಿದ್ದೀರೋ, ಅವರು ಅನುಭವಿಗಳು. ಐದಾರು ವರ್ಷಗಳ ಕಾಲ ಆಡಿದ್ದಾರೆ, ನಾಯಕತ್ವ ವಹಿಸಿದ್ದಾರೆ, ಎಲ್ಲವನ್ನೂ ಮಾಡಿದ್ದಾರೆ” ಎಂದಿದ್ದಾರೆ.
ಆದರೆ, ಇದೇ ಉಸಿರಿನಲ್ಲಿ, “ನೀವು ಯಾರ ಬಗ್ಗೆ ಮಾತನಾಡುತ್ತಿದ್ದೀರೋ, ಅವರು ಏನನ್ನೂ ದೊಡ್ಡದಾಗಿ ಸಾಧಿಸಿಲ್ಲ. ಐದಾರು ವರ್ಷಗಳಲ್ಲಿ ಯಾರೂ ಏನನ್ನೂ ಸಾಧಿಸಿಲ್ಲ. ಎಲ್ಲರ ಬಳಿಯೂ ಅವರದ್ದೇ ಆದ ಪ್ರದರ್ಶನಗಳಿವೆ, ಅಂಕಿಅಂಶಗಳಿವೆ, ಆದರೆ ಯಾರೂ ದೊಡ್ಡದಾಗಿ ಏನನ್ನೂ ಮಾಡಿಲ್ಲ” ಎಂದು ಹೇಳುವ ಮೂಲಕ, ಬಾಬರ್ ಮತ್ತು ರಿಜ್ವಾನ್ ಅವರ ನಾಯಕತ್ವ ಮತ್ತು ಪ್ರದರ್ಶನವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
“ಈ ಯುವಕರು ಒಂದು ಪಂದ್ಯದಲ್ಲಿ ವಿಫಲರಾದ ತಕ್ಷಣ, ನೀವೆಲ್ಲರೂ ಅವರ ಹಿಂದೆ ಬಿದ್ದಿದ್ದೀರಿ. ಸ್ವಲ್ಪ ತಾಳ್ಮೆ ಇರಲಿ” ಎಂದು ಹೇಳುವ ಮೂಲಕ, ಯುವ ಆಟಗಾರರಿಗೆ ಬೆಂಬಲ ಸೂಚಿಸಬೇಕೇ ಹೊರತು, ಅವರ ಮೇಲೆ ಅನಗತ್ಯ ಒತ್ತಡ ಹೇರಬಾರದು ಎಂದು ಅಮೀರ್ ಸಲಹೆ ನೀಡಿದ್ದಾರೆ.



















