ಬೆಂಗಳೂರು: ಬಹುನಿರೀಕ್ಷಿತ ಹಾಕಿ ಇಂಡಿಯಾ ಲೀಗ್ (HIL) 2025ರ ಹರಾಜಿಗೆ ಮುನ್ನ, ಎಸ್.ಜಿ. ಪೈಪರ್ಸ್ ಫ್ರಾಂಚೈಸಿಯು ತನ್ನಲ್ಲಿ ಉಳಿಸಿಕೊಂಡಿರುವ 17 ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯು ಅನುಭವಿ ಅಂತರರಾಷ್ಟ್ರೀಯ ಆಟಗಾರರು ಮತ್ತು ಉದಯೋನ್ಮುಖ ಭಾರತೀಯ ಪ್ರತಿಭೆಗಳ ಸಮತೋಲಿತ ಮಿಶ್ರಣವನ್ನು ಹೊಂದಿದೆ.
ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಭಾರತದ ಖ್ಯಾತ ಹಾಕಿ ಆಟಗಾರ ಪಿ.ಆರ್. ಶ್ರೀಜೇಶ್ ಅವರು ತಂಡದ ಹಾಕಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಮಾರ್ಗದರ್ಶನದಲ್ಲಿ ಈ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಕಳೆದ ಸೀಸನ್‌ನಲ್ಲಿ ಟೀಮ್ ಗೋನಸಿಕಾ ಪರ ಆಡಿದ್ದ ವೆಲ್ಷ್‌ನ ಅಂತರರಾಷ್ಟ್ರೀಯ ಆಟಗಾರ ಜಾಕೋಬ್ ಡ್ರೇಪರ್ ಅವರನ್ನು ಟ್ರೇಡ್ ಮೂಲಕ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
“ಎಸ್.ಜಿ. ಪೈಪರ್ಸ್ ಉಳಿಸಿಕೊಂಡಿರುವ ಆಟಗಾರರ ಪಟ್ಟಿ:”
*ಗೋಲ್‌ಕೀಪರ್‌ಗಳು: ಟೋಮಾಸ್ ಸ್ಯಾಂಟಿಯಾಗೋ (ಅರ್ಜೆಂಟೀನಾ), ಪವನ್ (ಭಾರತ).
*ಡಿಫೆಂಡರ್‌ಗಳು: ಜರ್ಮನ್‌ಪ್ರೀತ್ ಸಿಂಗ್, ವರೂಣ್ ಕುಮಾರ್, ರೋಹಿತ್, ಮಂಜೀತ್ (ಎಲ್ಲರೂ ಭಾರತ), ಗ್ಯಾರೆತ್ ಫರ್ಲಾಂಗ್ (ವೇಲ್ಸ್)
*ಮಿಡ್‌ಫೀಲ್ಡರ್‌ಗಳು: ಶಂಶೇರ್ ಸಿಂಗ್, ರಾಜ್‌ಕುಮಾರ್ ಪಾಲ್, ಅಂಕಿತ್ ಪಾಲ್, ಕಿಂಗ್ಸನ್ ಸಿಂಗ್ (ಎಲ್ಲರೂ ಭಾರತ), ಜೆಕಬ್ ಡ್ರೇಪರ್ (ವೇಲ್ಸ್), ಕೆ. ವೈಲಾಟ್ (ಆಸ್ಟ್ರೇಲಿಯಾ).
*ಫಾರ್ವರ್ಡ್‌ಗಳು: ಟೋಮಾಸ್ ಡೊಮೆನೆ (ಅರ್ಜೆಂಟೀನಾ), ಆದಿತ್ಯ ಲಳಾಜೆ, ಸೌರಭ್ ಆನಂದ್ ಖುಷ್ವಾಹಾ, ದಿಲರಾಜ್ ಸಿಂಗ್ (ಎಲ್ಲರೂ ಭಾರತ).
“ತಂಡದ ಬಲ”
ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಶಂಶೇರ್ ಸಿಂಗ್ ತಂಡಕ್ಕೆ ಮರಳಿರುವುದು ಆಟಗಾರರ ಮನೋಬಲವನ್ನು ಹೆಚ್ಚಿಸಿದೆ. ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾ ಕಪ್ 2025ರಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜರ್ಮನ್‌ಪ್ರೀತ್ ಸಿಂಗ್ ಮತ್ತು ಟೋಕಿಯೊ 2020 ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ವರೂಣ್ ಕುಮಾರ್ ಅವರು ತಂಡದ ರಕ್ಷಣಾ ವಿಭಾಗಕ್ಕೆ ಮತ್ತಷ್ಟು ಬಲ ತುಂಬಲಿದ್ದಾರೆ.
ತಂಡದ ಸಮತೋಲನದ ಬಗ್ಗೆ ಮಾತನಾಡಿದ ಹಾಕಿ ನಿರ್ದೇಶಕ ಪಿ.ಆರ್. ಶ್ರೀಜೇಶ್, “ಕಳೆದ ಸೀಸನ್‌ನಲ್ಲಿ ಆರು ಪ್ರಮುಖ ಆಟಗಾರರ ಅನುಪಸ್ಥಿತಿಯಿಂದ ನಮ್ಮ ತಂಡದ ಲಯ ತಪ್ಪಿತ್ತು. ಈ ಬಾರಿ ನಮ್ಮ ಪ್ರಮುಖ ಆಟಗಾರರನ್ನು ಉಳಿಸಿಕೊಂಡಿರುವುದು ನಿರ್ಣಾಯಕ. ಒಲಿಂಪಿಕ್ ಪದಕ ವಿಜೇತರಾದ ಶಂಶೇರ್, ಜರ್ಮನ್‌ಪ್ರೀತ್, ರಾಜ್‌ಕುಮಾರ್ ಮತ್ತು ವರೂಣ್ ಅವರ ಅನುಭವ ಹಾಗೂ ಯುವ ಆಟಗಾರರ ಉತ್ಸಾಹದೊಂದಿಗೆ ನಾವು ಈ ಬಾರಿ ಪ್ರಬಲ ಸ್ಪರ್ಧೆ ನೀಡಲು ಸಿದ್ಧರಾಗಿದ್ದೇವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.



















