ಬೆಂಗಳೂರು: ಪಹಲ್ಗಾಮ್ ಮೇಲಿನ ಭಯೋತ್ಪಾದಕ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ದ ಕಹಿ ನೆನಪುಗಳು ಮಾಸುವ ಮುನ್ನವೇ, ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿರುವುದು ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಹಿಂದೆ ಕ್ರಿಕೆಟ್ ಜ್ವರದಿಂದ ಬಿಸಿಯೇರುತ್ತಿದ್ದ ಭಾರತ-ಪಾಕ್ ಪಂದ್ಯ, ಈ ಬಾರಿ ಜನರ ವಿರೋಧದ ಅಲೆಗೆ ಸಿಲುಕಿದೆ. ಸೈನಿಕರ ತ್ಯಾಗವನ್ನು ಕಡೆಗಣಿಸಿ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ದೇಶದೊಂದಿಗೆ ಕ್ರಿಕೆಟ್ ಆಡುವುದು ಸರಿಯಲ್ಲ ಎಂಬ ಭಾವನೆ ದೇಶದಾದ್ಯಂತ ಬಲವಾಗಿ ವ್ಯಕ್ತವಾಗುತ್ತಿದೆ. ಸೇನೆಯ ಮಾಜಿ ಅಧಿಕಾರಿಗಳು, ರಾಜಕೀಯ ನಾಯಕರು, ಚಿತ್ರರಂಗದ ಗಣ್ಯರು ಮತ್ತು ಸಾಮಾನ್ಯ ನಾಗರಿಕರು ಸೇರಿದಂತೆ ಸಮಾಜದ ಎಲ್ಲಾ ಸ್ತರಗಳಿಂದಲೂ ಈ ಪಂದ್ಯವನ್ನು ಸಂಪೂರ್ಣವಾಗಿ ಬಹಿಷ್ಕರಿಸುವಂತೆ ಒಂದೇ ದನಿಯಲ್ಲಿ ಒತ್ತಾಯ ಕೇಳಿಬರುತ್ತಿದೆ.
ಈ ಆಕ್ರೋಶದ ಕೇಂದ್ರಬಿಂದುವಾಗಿರುವುದು 2025ರ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ. ಈ ದಾಳಿಯಲ್ಲಿ 26 ಅಮಾಯಕ ಪ್ರವಾಸಿಗರನ್ನು ಬಲಿ ಪಡೆಯಲಾಗಿತ್ತು. ಈ ಹೇಯ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ’ ಎಂಬ ಹೆಸರಿನಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಮತ್ತು ಪಾಕಿಸ್ತಾನದ ಒಳಭಾಗದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ನಿರ್ದಿಷ್ಟ ದಾಳಿಗಳನ್ನು ನಡೆಸಿತ್ತು.
ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್‌ಗೆ ಸೇರಿದ ಒಂಬತ್ತು ಉನ್ನತ ಮಟ್ಟದ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ಈ ಕಾರ್ಯಾಚರಣೆಯಲ್ಲಿ ನಾಶಪಡಿಸಲಾಗಿತ್ತು. ಈ ಕಾರ್ಯಾಚರಣೆಯು ಭಾರತದ ಭಯೋತ್ಪಾದನಾ ನಿಗ್ರಹ ನೀತಿಯಲ್ಲಿನ ಮಹತ್ವದ ಬದಲಾವಣೆಯನ್ನು ಜಗತ್ತಿಗೆ ಸಾರಿತ್ತು. ಈ ಸಂಘರ್ಷದ ನಂತರ, ಉಭಯ ದೇಶಗಳ ನಡುವಿನ ಸಂಬಂಧ ಅತ್ಯಂತ ಹದಗೆಟ್ಟಿದ್ದು, ಭಾರತವು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ರದ್ದು ಮಾಡಲಾಗಿತ್ತು.
ಏಷ್ಯಾ ಕಪ್ ಪಂದ್ಯ ಬೇಡ
ಇಂತಹ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ, ಜುಲೈನಲ್ಲಿ ಭಾರತ-ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಪಂದ್ಯವನ್ನು ಘೋಷಿಸಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಪಂದ್ಯಕ್ಕೆ ಒಂದು ದಿನ ಬಾಕಿ ಇರುವಾಗ, ಸಾಮಾಜಿಕ ಜಾಲತಾಣಗಳಲ್ಲಿ #BoycottIndvsPak ನಂತಹ ಹ್ಯಾಶ್‌ಟ್ಯಾಗ್‌ಗಳು ವ್ಯಾಪಕವಾಗಿ ಹರಿದಾಡುತ್ತಿವೆ. “ಪ್ರತಿಯೊಬ್ಬ ದೇಶಭಕ್ತ ಮತ್ತು ನಿಜವಾದ ಭಾರತೀಯನು ಈ ಪಂದ್ಯವನ್ನು ಕಟ್ಟುನಿಟ್ಟಾಗಿ ಬಹಿಷ್ಕರಿಸಬೇಕು” ಎಂದು ನಟ ಸತೀಶ್ ಶಾ ಮನವಿ ಮಾಡಿದರೆ, ಈ ಪಂದ್ಯಕ್ಕೆ “ಖಾಲಿ ಕ್ರೀಡಾಂಗಣ” ಸಿಗಬೇಕು ಎಂದು ನಿವೃತ್ತ ಮೇಜರ್ ಮಾಣಿಕ್ ಎಂ ಜೋ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂದ್ಯದ ವರದಿಯನ್ನು ಮಾಡದಂತೆ ಮಾಧ್ಯಮಗಳಿಗೆ ವಿನಂತಿಸಿರುವ ಶೌರ್ಯ ಚಕ್ರ ಪ್ರಶಸ್ತಿ ವಿಜೇತ ನಿವೃತ್ತ ಮೇಜರ್ ಪವನ್ ಕುಮಾರ್, “ನೀವು ಇದನ್ನು ಮೌನವಾಗಿ ನಿರ್ಲಕ್ಷಿಸಬಹುದು” ಎಂದು ಹೇಳಿದ್ದಾರೆ. ರಾಜಕೀಯ ವಿಶ್ಲೇಷಕ ತೆಹ್ಸೀನ್ ಪೂನಾವಾಲಾ, “ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ದೇಶದೊಂದಿಗೆ ನಾವು ಹೇಗೆ ಕ್ರಿಕೆಟ್ ಆಡಲು ಸಾಧ್ಯ?” ಎಂದು ಸರ್ಕಾರದ ನಿಲುವನ್ನು ಪ್ರಶ್ನಿಸಿದ್ದಾರೆ.
ಪ್ರಾಯೋಜಕತ್ವದಿಂದ ಹಿಂದಕ್ಕೆ
ಈ ವಿರೋಧ ಕೇವಲ ಮಾತುಗಳಿಗೆ ಸೀಮಿತವಾಗಿಲ್ಲ. ಪ್ರಮುಖ ಪ್ರಯಾಣ ಕಂಪನಿಯಾದ ‘EaseMyTrip’ ಜುಲೈನಲ್ಲಿಯೇ ಪಂದ್ಯದ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು. “ಕೆಲವು ವಿಷಯಗಳು ಕ್ರೀಡೆಗಿಂತ ದೊಡ್ಡವು. ಭಯೋತ್ಪಾದನೆಯನ್ನು ಉತ್ತೇಜಿಸುವ ದೇಶದೊಂದಿಗೆ ಸಂಬಂಧವನ್ನು ಸಾಮಾನ್ಯಗೊಳಿಸಲು ಪ್ರಯತ್ನಿಸುವ ಯಾವುದೇ ಕಾರ್ಯಕ್ರಮವನ್ನು ನಾವು ಬೆಂಬಲಿಸಲು ಸಾಧ್ಯವಿಲ್ಲ,” ಎಂದು ಅದರ ಸಂಸ್ಥಾಪಕ ನಿಶಾಂತ್ ಪಿಟ್ಟಿ ಸ್ಪಷ್ಟಪಡಿಸಿದ್ದರು. ಜನರ ಈ ಆಕ್ರೋಶದ ಪರಿಣಾಮವಾಗಿ, ವಿಶ್ವ ಕ್ರಿಕೆಟ್‌ನಲ್ಲಿ ಅತ್ಯಂತ ಬೇಡಿಕೆಯ ಪಂದ್ಯವಾಗಿದ್ದರೂ, ಈ ಬಾರಿ ಟಿಕೆಟ್‌ಗಳ ಮಾರಾಟದಲ್ಲಿ ಅನಿರೀಕ್ಷಿತ ಕುಸಿತ ಕಂಡುಬಂದಿದೆ. ಲಕ್ಷಗಟ್ಟಲೆ ಬೆಲೆಬಾಳುವ ಪ್ರೀಮಿಯಂ ಟಿಕೆಟ್‌ಗಳು ಮಾರಾಟವಾಗದೆ ಉಳಿದಿವೆ ಎಂದು ವರದಿಗಳು ತಿಳಿಸಿವೆ.
ಮುಂದುವರಿಸಲು ಕಾರಣವೇನು?
ಇಷ್ಟೆಲ್ಲಾ ವಿರೋಧಗಳ ನಡುವೆಯೂ, ಪಂದ್ಯವನ್ನು ಮುಂದುವರೆಸಲು ಒಂದು ಪ್ರಮುಖ ಕಾರಣವಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. 2036ರ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸುವ ಕನಸು ಕಾಣುತ್ತಿರುವ ಭಾರತಕ್ಕೆ, ಅಂತರಾಷ್ಟ್ರೀಯ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ಆಯೋಜಿಸಿದ ದಾಖಲೆ ಅತ್ಯಂತ ಮುಖ್ಯವಾಗಿದೆ. ಇಂತಹ ಪ್ರಮುಖ ಪಂದ್ಯಗಳನ್ನು ಬಹಿಷ್ಕರಿಸುವುದು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ದೃಷ್ಟಿಯಲ್ಲಿ ಭಾರತದ ಅಸ್ಥಿರತೆಯ ಸಂಕೇತವಾಗಿ ಕಾಣಿಸಬಹುದು. ಈ ಕಾರಣಕ್ಕಾಗಿ ಸರ್ಕಾರ ಮತ್ತು ಬಿಸಿಸಿಐ ಇಕ್ಕಟ್ಟಿಗೆ ಸಿಲುಕಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಆದಾಗ್ಯೂ, ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತೀಯ ತಂಡಕ್ಕೆ ಕಪಿಲ್ ದೇವ್ ಅವರಂತಹ ಹಿರಿಯ ಆಟಗಾರರು “ಕೇವಲ ನಿಮ್ಮ ಕೆಲಸವನ್ನು ಮಾಡಿ” ಎಂದು ಸಲಹೆ ನೀಡಿದ್ದರೂ, ಈ ಪಂದ್ಯವು ಕೇವಲ ಕ್ರೀಡೆಯಾಗಿ ಉಳಿದಿಲ್ಲ, ಬದಲಿಗೆ ರಾಷ್ಟ್ರೀಯ ಭಾವನೆಗಳ, ಸ್ವಾಭಿಮಾನದ ಮತ್ತು ಹುತಾತ್ಮರ ತ್ಯಾಗದ ಪ್ರತೀಕವಾಗಿ ಮಾರ್ಪಟ್ಟಿದೆ.



















