ಭಾರತದಲ್ಲಿ ಮುಂದಿನ ಪೀಳಿಗೆಯ ಒಲಿಂಪಿಕ್ ಚಾಂಪಿಯನ್‌ಗಳನ್ನು ರೂಪಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ (IIS), ‘ಐಐಎಸ್ ಸಿಖಾಯೇಗ’ (IIS Sikhaega) ಎಂಬ ಹೊಸ ಡಿಜಿಟಲ್ ಕಲಿಕಾ ವೇದಿಕೆಯನ್ನು ಆರಂಭಿಸಿದೆ. ಈ ಮೂಲಕ ದೇಶದ ಯುವ ಕ್ರೀಡಾಪಟುಗಳಿಗೆ ವಿಶ್ವದರ್ಜೆಯ ಕ್ರೀಡಾ ಜ್ಞಾನವನ್ನು ಸುಲಭವಾಗಿ ತಲುಪಿಸುವ ಗುರಿ ಹೊಂದಿದೆ
‘ಐಐಎಸ್ ಸಿಖಾಯೇಗ’ ಕಾರ್ಯಕ್ರಮದಡಿಯಲ್ಲಿ, ಕ್ರೀಡಾಪಟುಗಳಿಗೆ ಸುಲಭವಾಗಿ ಅರ್ಥವಾಗುವಂತಹ ಚಿಕ್ಕ ಚಿಕ್ಕ ವೀಡಿಯೊಗಳ ಮೂಲಕ ತರಬೇತಿ ನೀಡಲಾಗುತ್ತದೆ. ಐಐಎಸ್‌ನ ನುರಿತ ತರಬೇತುದಾರರು, ತಜ್ಞರು ಮತ್ತು ಯುವ ಕ್ರೀಡಾಪಟುಗಳು ತಮ್ಮ ಅನುಭವವನ್ನು ಈ ವೇದಿಕೆಯ ಮೂಲಕ ಹಂಚಿಕೊಳ್ಳಲಿದ್ದಾರೆ. ಫಿಟ್‌ನೆಸ್‌ನ ಮೂಲಭೂತ ಅಂಶಗಳಿಂದ ಹಿಡಿದು, ಉನ್ನತ ಮಟ್ಟದ ಕ್ರೀಡೆಗಳಲ್ಲಿನ ಸೂಕ್ಷ್ಮತೆಗಳವರೆಗೆ ವಿವಿಧ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ.
ಪ್ರತಿ ತಿಂಗಳು ಮೂರು ವೀಡಿಯೊಗಳನ್ನು ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲು ಯೋಜನೆ ರೂಪಿಸಲಾಗಿದ್ದು, ಕ್ರೀಡಾಪಟುಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕಲಿಯಲು ಇದು ಸಹಕಾರಿಯಾಗಲಿದೆ.
ಕ್ರೀಡಾ ಸಂಸ್ಕೃತಿ ಬಲಪಡಿಸುವತ್ತ ಹೆಜ್ಜೆ
ಈ ಬಗ್ಗೆ ಮಾತನಾಡಿರುವ ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್‌ನ ಅಧ್ಯಕ್ಷೆ ಮನೀಷಾ ಮಲ್ಹೋತ್ರಾ, “ಭಾರತದ ಎಲ್ಲಾ ಕ್ರೀಡಾಪಟುಗಳಿಗೆ ಐಐಎಸ್‌ನ ಪರಿಣತಿ ಮತ್ತು ತರಬೇತಿಯನ್ನು ತಲುಪಿಸುವುದು ನಮ್ಮ ಧ್ಯೇಯ. ‘ಐಐಎಸ್ ಸಿಖಾಯೇಗ’ ಮೂಲಕ ನಮ್ಮ ಕೋಚ್‌ಗಳು, ಸೌಲಭ್ಯಗಳು ಮತ್ತು ತಾಂತ್ರಿಕ ಜ್ಞಾನವನ್ನು ಐಐಎಸ್‌ನ ಹೊರಗಿರುವ ಯುವಕರಿಗೂ ತಲುಪಿಸಲು ನಾವು ಬಯಸುತ್ತೇವೆ” ಎಂದು ಹೇಳಿದ್ದಾರೆ.
ಈ ಯೋಜನೆಯು ಕೇವಲ ಒಂದು ಡಿಜಿಟಲ್ ಉಪಕ್ರಮವಲ್ಲ, ಬದಲಿಗೆ ಭಾರತದ ಕ್ರೀಡಾ ಸಂಸ್ಕೃತಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಸಂಸ್ಥೆ ತಿಳಿಸಿದೆ. ತಂತ್ರಜ್ಞಾನ ಮತ್ತು ಪರಿಣತಿಯನ್ನು ಒಗ್ಗೂಡಿಸಿ, ಮುಂದಿನ ತಲೆಮಾರಿನ ಕ್ರೀಡಾಪಟುಗಳನ್ನು ಬೆಳೆಸುವ ತನ್ನ ಧ್ಯೇಯವನ್ನು ಐಐಎಸ್ ಈ ಮೂಲಕ ಮತ್ತಷ್ಟು ಬಲಪಡಿಸುತ್ತಿದೆ.



















