ಬೆಂಗಳೂರು: ದೇಶದಲ್ಲಿ ಬಂಗಾರ ಹಾಗೂ ಬೆಳ್ಳಿಯ ಆಭರಣಗಳ ಬೆಲೆಯು ದಿನೇದಿನೆ ಜಾಸ್ತಿಯಾಗುತ್ತಿದೆ. ಅದರಲ್ಲೂ, ಬೆಳ್ಳಿ ಹಾಗೂ ಬಂಗಾರದ ಬೆಲೆಯ ಮಧ್ಯೆ ಸ್ಪರ್ಧೆ ಇರುವಂತೆ ಬೆಲೆ ಜಾಸ್ತಿಯಾಗುತ್ತಿದೆ. ಖರೀದಿ ಮಾಡುವವರೂ ಅಷ್ಟೇ, ಅವರು ಕೂಡ ಸ್ಪರ್ಧೆಗೆ ಬಿದ್ದಂತೆ ಖರೀದಿ ಮಾಡುತ್ತಿದ್ದಾರೆ. ಹಬ್ಬದ ಸೀಸನ್ ಆರಂಭವಾಗಿರುವುದು ಕೂಡ ಭರ್ಜರಿ ಖರೀದಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ, ಬಂಗಾರದ ಜತೆಗೆ ಬೆಳ್ಳಿಯನ್ನೂ ಹೂಡಿಕೆ ದೃಷ್ಟಿಯಿಂದ ಖರೀದಿಸುತ್ತಿರುವುದು ಇತ್ತೀಚೆಗೆ ಜಾಸ್ತಿಯಾಗಿದೆ. ಅಷ್ಟೇ ಏಕೆ, ಬೆಳ್ಳಿ ಬೆಲೆಯು ಇನ್ನೊಂದು ವರ್ಷದಲ್ಲಿ ಕೆ.ಜಿ 1.5 ಲಕ್ಷ ರೂ. ಆಗಲಿದ್ದು, ಹೂಡಿಕೆಗೆ ಬೆಸ್ಟ್ ಎಂದು ವರದಿಯೊಂದು ತಿಳಿಸಿದೆ.
ಹೌದು, ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸ್ (MOFSL) ಕಂಪನಿಯು ಬೆಳ್ಳಿ ಬೆಲೆಯೇರಿಕೆಯನ್ನು ಅಂದಾಜಿಸಿದೆ. ಬೆಳ್ಳಿಯ ಬೆಲೆಯಲ್ಲಿ ಇನ್ನೊಂದು ವರ್ಷದಲ್ಲಿ ಗಣನೀಯವಾಗಿ ಏರಿಕೆಯಾಗಲಿದೆ. ಇನ್ನೊಂದು ವರ್ಷದಲ್ಲಿ ಬೆಳ್ಳಿ ಬೆಲೆಯು 1.5 ಲಕ್ಷ ರೂಪಾಯಿ ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ. ಹಾಗಾಗಿ, ಈಗ ಹೂಡಿಕೆ ದೃಷ್ಟಿಯಿಂದ ಬೆಳ್ಳಿ ಖರೀದಿಸುವುದು ಉತ್ತಮ ಎಂದು ಹೇಳಲಾಗುತ್ತದೆ.
ಬೆಳ್ಳಿಯ ಬೆಲೆಯು ಈಗ ಒಂದು ಕೆ.ಜಿಗೆ 1.29 ಲಕ್ಷ ರೂಪಾಯಿ ಇದೆ. ಇದು ಇನ್ನೊಂದು ವರ್ಷದಲ್ಲಿ 1.5 ಲಕ್ಷ ರೂ. ಆಗಲಿದೆ. ಆರು ತಿಂಗಳಲ್ಲೇ ಬೆಲೆಯು 1.35 ಲಕ್ಷ ರೂಪಾಯಿ ದಾಟಲಿದೆ. ಕಳೆದ ಒಂದು ವರ್ಷದಲ್ಲಿ ಬೆಳ್ಳಿಯ ಬೆಲೆಯು ಶೇ.37ರಷ್ಟು ಏರಿಕೆಯಾಗಿದೆ. ಅಂದರೆ, ಬೆಳ್ಳಿ ಖರೀದಿಸಿವರಿಗೆ ಶೇ.37ರಷ್ಟು ರಿಟರ್ನ್ಸ್ ದೊರೆತಿದೆ ಎಂದು ತಿಳಿಸಲಾಗಿದೆ.
ಕಳೆದ ಕೆಲ ವರ್ಷಗಳಿಂದ ಬೆಳ್ಳಿಗೂ ಭಾರಿ ಬೇಡಿಕೆ ಉಂಟಾಗುತ್ತಿದೆ. ಜಾಗತಿಕ-ಭೌಗೋಳಿಕ ಸಂಘರ್ಷಗಳು ಕೂಡ ಬೆಳ್ಳಿ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ಹಾಗಾಗಿ, ಬೆಳ್ಳಿಯನ್ನು ಈಗ ಖರೀದಿಸಿದರೆ, ಮುಂದಿನ ದಿನಗಳಲ್ಲಿ ಒಳ್ಳೆಯ ರಿಟರ್ನ್ಸ್ ಸಿಗಲಿದೆ ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.