ನವ ದೆಹಲಿ : ಪ್ರಧಾನಿ ಮೋದಿ ಅವರು ಶನಿವಾರ ಮಣಿಪುರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಪ್ರಧಾನ ಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಇಂಫಾಲ್ ಮತ್ತು ಚುರಾಚಾಂದ್‌ಪುರ ಜಿಲ್ಲಾ ಕೇಂದ್ರಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಫಾಲ್‌ನ ಕಂಗಲಾ ಕೋಟೆ ಹಾಗೂ ಚುರಾಚಾಂದ್‌ಪುರದ ಶಾಂತಿ ಮೈದಾನದಲ್ಲಿ ಭಾರಿ ಸಂಖ್ಯೆಯ ಕೇಂದ್ರ ಹಾಗೂ ರಾಜ್ಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲಿ ಪ್ರಧಾನ ಮಂತ್ರಿಯ ಕಾರ್ಯಕ್ರಮಕ್ಕಾಗಿ ಭವ್ಯ ವೇದಿಕೆಯನ್ನು ನಿರ್ಮಿಸಲಾಗುತ್ತಿದೆ.
ಪ್ರಧಾನಿ ಮಿಜೋರಾಂ ಮೂಲಕ ಮಣಿಪುರಕ್ಕೆ ಆಗಮಿಸುವ ಸಾಧ್ಯತೆಯಿದೆ. ಈ ಬಗ್ಗೆ ಕೇಂದ್ರ ಸರ್ಕಾರವಾಗಲಿ, ರಾಜ್ಯದ ಆಡಳಿತವಾಗಲಿ ಯಾವುದೇ ಅಧೀಕೃತ ಹೇಳಿಕೆಯನ್ನು ನೀಡಿಲ್ಲ. ಆದಾಗ್ಯೂ, ಅವರ ಭೇಟಿಗಾಗಿ ರಾಜ್ಯದಲ್ಲಿ ಹಲವು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
2023ರಲ್ಲಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಕೋಮುಗಲಭೆ ಭುಗಿಲೆದ್ದ ಬಳಿಕ, ಪ್ರಧಾನಿ ನೀಡುತ್ತಿರುವ ಮೊದಲ ಭೇಟಿ ಇದು. ಹಿಂಸಾಚಾರದಿಂದಾಗಿ ಸುಮಾರು 250 ಜನರು ಮೃತಪಟ್ಟಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ.



















