ಚಿಕ್ಕಮಗಳೂರು : ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡದಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರದಿಂದ ತನಿಖೆಗೆ ಆದೇಶ ಆಗಿದೆ. ಖುದ್ದಾಗಿ ಸಿಎಂ ಸಿದ್ದರಾಮಯ್ಯ ಅವರೇ ಡಿಜಿಪಿ ಸಲೀಂ ಅವರಿಗೆ ಜಾತಿ, ಧರ್ಮ, ಪಕ್ಷಾತೀತವಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ. ಹೆಚ್ಚುವರಿ ತನಿಖೆಯ ಬಳಿಕ ಕಠಿಣವಾದ ಕ್ರಮ ಆಗುತ್ತದೆ ಎಂದು ಮಂಡ್ಯ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ, ಈ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ. ಅದರ ಬಗ್ಗೆ ನಮಗೆ ಮೊದಲೇ ಮಾಹಿತಿ ಇತ್ತು. ಈಗಾಗಲೇ 21 ಜನರನ್ನು ಬಂಧಿಸಲಾಗಿದ್ದು, ಇದರ ಬಗ್ಗೆ ಹೆಚ್ಚುವರಿ ಕ್ರಮವನ್ನು ಕೈಗೊಳ್ಳುತ್ತೇವೆ. ಇದರ ಮಧ್ಯದಲ್ಲಿ ಬಿಜೆಪಿಯವರು ರಾಜಕಾರಣವನ್ನು ಬಳಸುತ್ತಿದ್ದಾರೆ. ಅದಕ್ಕೆ ಉತ್ತರ ಕೊಡುವ ಸಮಯದಲ್ಲಿ ಕೊಡುತ್ತೇವೆ. ಈಗ ಉತ್ತರ ಕೊಡುವುದಿಲ್ಲ ಎಂದು ಹೇಳಿದ್ದಾರೆ.
“ಹಿಂದೂಗಳನ್ನು ಬಿಜೆಪಿಯವರೇನೂ ದತ್ತು ತೆಗೆದುಕೊಂಡಿದ್ದಾರಾ ? ನಾವೆಲ್ಲಾ ಏನು? ಇಲ್ಲಿರುವವರೆಲ್ಲಾ ಏನು? ರಾಜಕಾರಣ ಮಾಡುವುದಕ್ಕೆ ತಯಾರಾಗಿರುವವರ ಬಗ್ಗೆ ನಾನೇನು ಹೇಳುವುದಕ್ಕೆ ಸಾಧ್ಯವಿಲ್ಲ. ಹಿಂದೂ, ಮುಸ್ಲಿಂ ಎಲ್ಲರೂ ಸಭೆಗೆ ಬಂದಿದ್ದರು. ಸೌಹಾರ್ದಯುತವಾಗಿ ಅವರ ಕಾರ್ಯಕ್ರಮ ನಡೆಸುವುದಕ್ಕೆ ನಮ್ಮದು ಯಾವುದೇ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದಾರೆ.