ವಿಜಯನಗರ : ತುಂಗಭದ್ರಾ ಅಣೆಕಟ್ಟೆಯ ಎಲ್ಲಾ 33 ಕ್ರೆಸ್ಟ್ ಗೇಟ್ ಗಳನ್ನು ಶೀಘ್ರದಲ್ಲೇ ಅಳವಡಿಸಬೇಕು, ರೈತರ ಬೆಳೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿ ಇಂದು (ಸೋಮವಾರ) ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರದ ಪಕ್ಷಾತೀತ ಹೋರಾಟ ಸಮಿತಿ ವತಿಯಿಂದ ಇಲ್ಲಿನ ತುಂಗಭದ್ರಾ ಮಂಡಳಿ ಕಚೇರಿ ಸಮೀಪ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ವೆಂಕಟಪ್ಪ ನಾಯಕ, ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ರೈತ ಮುಖಂಡರಾದ ವೀರಸಂಗಯ್ಯ, ಬಡೆಲಡಕು ನಾಗೇಂದ್ರ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು, ಕೃಷಿ ಸಂಬಂಧಿತ ಉದ್ಯಮಗಳನ್ನು ನಂಬಿದ ಕೆಲಸಗಾರರ ಹಿತ ಕಾಯುವ ಕೆಲಸ ಆದ್ಯತೆಯ ಮೇಲೆ ಆಗಬೇಕು ಎಂದು ಆಗ್ರಹಿಸಿದ್ದಾರೆ.