ಗದಗ: ಇತ್ತೀಚೆಗೆ ಬೀದಿ ನಾಯಿಗಳ (Stray dog attack) ಹಾವಳಿ ಮಿತಿ ಮೀರುತ್ತಿದ್ದು, ಮಕ್ಕಳು, ಮಹಿಳೆಯರು, ವಯೋವೃದ್ಧರ ಮೇಲೆ ದಾಳಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬರುತ್ತಲೇ ಇವೆ. ಜಿಲ್ಲೆಯ ಲಕ್ಷ್ಮೇಶ್ವರ (Lakshmeshwara) ಪಟ್ಟಣ ಮ್ಯಾಗೇರಿ ಓಣಿಯಲ್ಲಿ ಮಗುವಿನ ಮೇಲೆ ನಾಯಿ ದಾಳಿ ನಡೆಸಿರುವ ಘಟನೆ ನಡೆದಿದೆ.
ಮನೋಜ್ ಬನ್ನಿ (4) ಎಂಬ ಬಾಲಕನ ಮೇಲೆ ನಾಯಿ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಬೀದಿ ನಾಯಿಗಳು ಬಾಲಕನ ತಲೆ, ಬೆನ್ನು ಭಾಗಕ್ಕೆ ಕಚ್ಚಿ ಗಾಯಗೊಳಿಸಿವೆ. ಕೂಡಲೇ ಸ್ಥಳೀಯರು ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಗೆ ಬಾಲಕನನ್ನು ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿನಾಯಿಗಳು ದಾಳಿ ಮಾಡುತ್ತಿದ್ದರೂ ಸುಮ್ಮನೆ ಕುಳಿತಿರುವ ಲಕ್ಷ್ಮೇಶ್ವರ ಪುರಸಭೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಅಲ್ಲದೇ, ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಮನವಿ ಮಾಡುತ್ತಿದ್ದಾರೆ.



















