ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ 107 ಕೆರೆಗಳಿಗೆ ಬೇಡ್ತಿ ನದಿಯಿಂದ ನೀರು ತುಂಬಿಸುವ 179.50 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಸಂಪುಟದ ಈ ನಿರ್ಣಯಕ್ಕೆ ಕಾರ್ಮಿಕ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಭಾಗದ ಅನ್ನದಾತರ ಬಹುದಿನಗಳ ಬೇಡಿಕೆಯಾಗಿದ್ದ ಮತ್ತು ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರ ಕನಸಾದ ಈ ಏತ ನೀರಾವರಿ ಯೋಜನೆ ಈಗ ಸಾಕಾರಗೊಳ್ಳುತ್ತಿದ್ದು, ಲಾಡ್ ಅವರ ನಿರಂತರ ಶ್ರಮ ಮತ್ತು ಪ್ರಯತ್ನಕ್ಕೆ ಸದ್ಯ ಫಲ ದೊರಕಿದೆ.
ಈ ನೀರೆತ್ತುವ ಯೋಜನೆಗೆ ಇದೀಗ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಸಂಪುಟದಲ್ಲಿ ಅನುಮೋದನೆ ಪಡೆದು ವೇಗ ಪಡೆದಂತಾಗಿದೆ. ಅಂತರ್ಜಲ ಮಟ್ಟ ಹೆಚ್ಚಿಸುವ ಶಾಶ್ವತ ನೀರಾವರಿ ಯೋಜನೆ ಇದಾಗಿದ್ದು, ಈ ಭಾಗದ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಈ ಕೆರೆ ತುಂಬಿಸುವ ಯೋಜನೆಯಿಂದ ಅನುಕೂಲವಾಗಲಿದೆ.
ಕೇವಲ ಕಲಘಟಗಿ ತಾಲೂಕು ಮಾತ್ರವಲ್ಲದೆ ಧಾರವಾಡ ಜಿಲ್ಲೆಯ ಇತರ ತಾಲೂಕಿನಲ್ಲಿನ ಕೆರೆಗಳಿಗೂ ಬೇಡ್ತಿ ನದಿ ನೀರು ಹರಿಸುವ ಮಹದಾಸೆ ಸಚಿವರದ್ದಾಗಿತ್ತು. ಇದೀಗ ಕಲಘಟಗಿ ತಾಲೂಕಿನ 107 ಕೆರೆಗಳಿಗೆ ಬೇಡ್ತಿ ನದಿಯಿಂದ ನೀರು ತುಂಬಿಸುವ 179.50 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸಂಪುಟ ಅಸ್ತು ಎಂದಿದೆ.