ಬೆಂಗಳೂರು : ರಾಜರಾಜೇಶ್ವರಿನಗರದ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧದ ಮಹಿಳೆಯ ಮೇಲೆ ಅತ್ಯಾಚಾರ, ಜಾತಿನಿಂದನೆ ಸಹಿತ ಒಟ್ಟು 6 ಪ್ರಕರಣಗಳ ಪೈಕಿ 3ರಲ್ಲಿ ಸಿಐಡಿಯ ಎಸ್‌ಐಟಿ ಅಧಿಕಾರಿಗಳು ಸಾಕ್ಷಾಧಾರಗಳ ಕೊರತೆ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಅತ್ಯಾಚಾರ ಮಾಡಿಸಿದ್ದರು ಎನ್ನಲಾಗಿದ್ದ ಆರೋಪದಡಿ ತನಿಖೆ ಎದುರಿಸಿದ್ದ ಮುನಿರತ್ನಗೆ ಈ ಪ್ರಕರಣದಲ್ಲಿ ದೊಡ್ಡ ನಿರಾಳತೆ ದೊರಕಿದಂತಾಗಿದೆ.
ಮುನಿರತ್ನ ಮತ್ತು ಅವರ ಬೆಂಬಲಿಗರಾದ ವಸಂತ್, ಚನ್ನಕೇಶವ, ಕಮಲ್ ವಿರುದ್ದದ ಪ್ರಕರಣದಲ್ಲಿ ಎಸ್‌ಐಟಿ ನ್ಯಾಯಾಲಯಕ್ಕೆ ಬಿ ವರದಿ ಸಲ್ಲಿಸಿದೆ. ಮುನಿರತ್ನ ವಿರುದ್ಧ 2 ಅತ್ಯಾಚಾರ, ಬಿಬಿಎಂಪಿ ನೌಕರನಿಗೆ ಜೀವ ಬೆದರಿಕೆ ಹಾಕಿರುವುದು, ಮಾಜಿ ಬಿಬಿಎಂಪಿ ಸದಸ್ಯನಿಗೆ ಜಾತಿ ನಿಂದನೆ, ಮಾಜಿ ಬಿಬಿಎಂಪಿ ಸದಸ್ಯೆ ಪತಿಗೆ ಹನಿಟ್ರ್ಯಾಪ್ ಯತ್ನ ಸಹಿತ ಒಟ್ಟು 6 ಪ್ರಕ ರಣಗಳು ದಾಖಲಾಗಿವೆ. ಈ ಪೈಕಿ 1 ಅತ್ಯಾಚಾರ, ಬಿಬಿಎಂಪಿ ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕ ರಣದಲ್ಲಿ ಎಸ್‌ಐಟಿ ಜಾರ್ಜ್‌ಶೀಟ್ ಸಲ್ಲಿಸಿತ್ತು. ಉಳಿದ 3 ಪ್ರಕರಣಗಳಲ್ಲಿ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಬಿ ವರದಿ ಸಲ್ಲಿಸಿದೆ.
“ಏನಿದು ಮುನಿರತ್ನ ವಿರುದ್ಧದ ಪ್ರಕರಣ?”
2025 ಮೇ 20ರಂದು ಸುಮಾರು 40 ವರ್ಷ ವಯಸ್ಸಿನ ಮಹಿಳೆ ನೀಡಿದ ದೂರಿನಂತೆ ನಗರದ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಶಾಸಕ ಮುನಿರತ್ನ ಹಾಗೂ ಅವರ ಬೆಂಬಲಿಗರ ವಿರುದ್ಧ ಸಾಮೂಹಿಕ ಅತ್ಯಾಚಾರದ ಪ್ರಕರಣ ದಾಖಲಾಗಿತ್ತು. ಸರಕಾರ ಪ್ರಕರಣವನ್ನು ಸಿಐಡಿಯ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವರ್ಗಾಯಿಸಿತ್ತು.
“ಮುನಿರತ್ನ ವಿರುದ್ಧಮಹಿಳೆ ದೂರು !”
ಈ ನಡುವೆ ಬೆಂಗಳೂರಿನ ಬಿಜೆಪಿ ಕಚೇರಿಕೆಗೆ ಮಹಿಳೆಯೋರ್ವಳು ಶಾಸಕ ಮುನಿರತ್ನ ವಿರುದ್ಧ ದೂರು ನೀಡಲು ಬಂದಿದ್ದಾಳೆ.
ಮಹಿಳೆ ಬಿಜೆಪಿ ಕಚೇರಿಗೆ ಪತ್ರದ ಮೂಲಕ ಮುನಿರತ್ನ ವಿರುದ್ಧ ದೂರು ನೀಡಿದ್ದು, “ಕಾಂಗ್ರೆಸ್ ನಲ್ಲಿ ಇದ್ದಾಗಲಿಂದಲೂ ಮುನಿರತ್ನ ನನಗೆ ಕಿರುಕುಳ ಕೊಡುತ್ತಿದ್ದರು. ಬಿಜೆಪಿಗೆ ಬಂದ ಮೇಲೂ ನನಗೆ ಕಿರುಕುಳ ಕೊಡುತ್ತಿದ್ದಾರೆ. ನನ್ನ ಮನೆ ಬಳಿ ಬಂದು ಅವರ ಬೆಂಬಲಿಗರು ಹೊಡೆದಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾರೆ. ನಮ್ಮ ದೂರಿಗೆ ಯಾವುದೇ ಮನ್ನಣೆ ಸಿಗಲ್ಲ. ನಾನು ಕಟ್ಟಾ ಆರ್ ಎಸ್ ಎಸ್ ಹಾಗೂ ಬಿಜೆಪಿ ಕಾರ್ಯಕರ್ತೆ” ಎಂದು ದೂರಿನ ಪ್ರತಿಯಲ್ಲಿ ಉಲ್ಲೇಖಿಸಿದ್ದಾರೆ.
ಮಾತ್ರವಲ್ಲದೇ, ಈ ಸಂಬಂಧಿಸಿದಂತೆ ವರದಿಗಾರರೊಂದಿಗೆ ಮಾತನಾಡಿದ ದೂರುದಾರ ಮಹಿಳೆ ಪೀಣ್ಯ ನಿವಾಸಿ ರತಿಕಲಾ, “ನಾನು ವಿಜಯೇಂದ್ರ ಭೇಟಿ ಮಾಡಲು ಬಂದೆ. ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಲು ಬಂದೆ. ನನಗೆ ಆಗಿರುವ ಅನ್ಯಾಯ ಸರಿಪಡಿಸಿ ಎಂದು ಮನವಿ ಮಾಡಿದ್ದೇನೆ ಎಂದು ಅವಲತ್ತುಕೊಂಡಿದ್ದಾರೆ.



















