ಬೆಂಗಳೂರು: ಎಂಜಿನಿಯರಿಂಗ್, ಟೆಕ್ನಾಲಜಿ , ಸೈನ್ಸ್, ಆರ್ಕಿಟೆಕ್ಚರ್ ಹಾಗೂ ಮಾನವಿಕ ವಿಷಯಗಳ ಕೋರ್ಸ್ ಗಳ ಪ್ರವೇಶಾತಿಗೆ ನಡೆಸುವ 2026ನೇ ಸಾಲಿನ ಗ್ರಾಜುಯೇಟ್ ಆಪ್ಟಿಟ್ಯೂಡ್ ಟೆಸ್ಟ್ ಎಂಜಿನಿಯರಿಂಗ್ (ಗೇಟ್- GATE 2026 Registration) ಪರೀಕ್ಷೆಗೆ ಆನ್ ಲೈನ್ ಮೂಲಕ ನೋಂದಣಿ ಆರಂಭವಾಗಿದೆ.
ಐಐಟಿ ಗುವಾಹಟಿ ಗೇಟ್ 2026 ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಸೆಪ್ಟೆಂಬರ್ 28 ರವರೆಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಗೇಟ್ ಪರೀಕ್ಷೆಯು ಫೆಬ್ರವರಿ 7, 8, 14 ಮತ್ತು 15, 2026 ರಂದು ನಡೆಯಲಿದೆ ಮತ್ತು ಫಲಿತಾಂಶ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿದೆ.
ಗೇಟ್ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆ ಆಗಿದೆ. ಇದು ಅಂಡರ್ ಗ್ರಾಜುಯೇಟ್ ಹಂತದ ಎಂಜಿನಿಯರಿಂಗ್, ತಂತ್ರಜ್ಞಾನ, ವಿಜ್ಞಾನ, ಆರ್ಕಿಟೆಕ್ಚರ್, ಮಾನವಿಕ ವಿಷಯಗಳನ್ನು ಸಂಕ್ಷಿಪ್ತವಾಗಿ ಅರ್ಥ ಮಾಡಿಕೊಂಡಿರುವ ಬಗ್ಗೆ ತಿಳಿಯಲು ನಡೆಸುವ ಪರೀಕ್ಷೆಯಾಗಿದೆ. ಈ ಪರೀಕ್ಷೆ ಬರೆಯುವವರು ವಿವಿಧ ಸ್ನಾತಕೋತ್ತರ ಮತ್ತು ಡಾಕ್ಟರಲ್ ಪ್ರೋಗ್ರಾಮ್ ಗಳಿಗೆ ಐಐಟಿಗಳು, ಐಐಎಸ್‌ಸಿಗಳು, ಐಐಐಟಿಗಳು, ಎನ್‌ಐಟಿಗಳು ಸೇರಿ ದೇಶದಹೆಸರಾಂತ ಸಂಸ್ಥೆಗಳಲ್ಲಿ/ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ.
ಕೇಂದ್ರ ಸರ್ಕಾರಿ, ರಾಜ್ಯ ಸರ್ಕಾರಿ ಅಧೀನದ ಹಲವು ಪಬ್ಲಿಕ್ ಸೆಕ್ಟಾರ್ ಅಂಡರ್ ಟೇಕನ್ ಸಂಸ್ಥೆಗಳು ವಿವಿಧ ಹುದ್ದೆಗಳ ಭರ್ತಿಗೆ ಗೇಟ್ ಅಂಕಗಳನ್ನು ಪರಿಗಣಿಸುತ್ತವೆ. ಉದಾಹರಣೆಗೆ, ಬಿ ಎಚ್ ಇ ಎಲ್, ಬಿ ಎಸ್ ಎನ್ ಎಲ್, ಸಿ ಐ ಎಲ್, ಸಿ ಆರ್ ಐ ಎಸ್ ಸೇರಿ ಇತ್ಯಾದಿ ಸಂಸ್ಥೆಗಳು. ಹಾಗಾಗಿ, ಗೇಟ್ ಪರೀಕ್ಷೆಯು ಪ್ರಮುಖವಾಗಿದೆ. ಗೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಅದು 3 ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಆಸಕ್ತಿ ಇರುವವರು gate2026.iitg.ac.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.