ಬೆಂಗಳೂರು : ಜಿಎಸ್‌ಟಿ ಮಂಡಳಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಜಿಎಸ್‌ಟಿ ತೆಗೆದುಕೊಂಡ ಈ ನಿರ್ಧಾರವನ್ನು ಕರ್ನಾಟಕದ ಜನರು ಹಾಗೂ ಬಿಜೆಪಿ ಸ್ವಾಗತ ಮಾಡುತ್ತದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ನೇತತ್ವದಲ್ಲಿ ಜಿಎಸ್‌ಟಿ ಕಡಿತದ ವಿಚಾರದಲ್ಲಿ ಕ್ರಾಂತಿಕಾರಿ ನಿಲುವು ಪಡೆದಿದೆ. ಬರೋಬ್ಬರಿ ಎಂಟು ವರ್ಷಗಳ ಬಳಿಕ ರಿವೈಸ್ ಮಾಡಲಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಶ್ವಥ್, ಟ್ಯಾಕ್ಸ್ ರಾಷನಲೈಸ್ ಮಾಡಬೇಕು ಎಂಬ ಬೇಡಿಕೆ ಇತ್ತು. ಶೇ.12 ಹಾಗೂ ಶೇ. 28 ಜಿಎಸ್‌ಟಿಯನ್ನು ಸದ್ಯ ತೆಗೆದುಹಾಕಲಾಗಿದೆ. ಸದ್ಯ, ಶೇ. 5 ಮತ್ತು ಶೇ. 18 ಮಾತ್ರ ಉಳಿದಿದೆ. ಬಹಳ ಪ್ರಮುಖವಾಗಿ ಸಡಿಲಿಕೆ ಇಂದ ಜೀವ ವಿಮೆಯಲ್ಲೂ ಸಡಿಲಿಕೆ ಮಾಡಲಾಗಿದೆ. ಕೃಷಿ ಕ್ಷೇತ್ರದಲ್ಲಿ ಶೇ.12 ವರೆಗೂ ಇದ್ದ ಜಿಎಸ್ ಟಿ ಶೇ. 5ಕ್ಕೆ ಇಳಿಸಲಾಗಿದೆ ಎಂದಿದ್ದಾರೆ.
ಗ್ರಾಹಕರ ಬಳಕೆಯ ವಸ್ತುಗಳಿಗೆ ಶೇ. 0 ನಿಂದ ಶೇ.5 ವರೆಗೂ ಇಳಿಸಲಾಗಿದೆ. ಉತ್ಪಾದನಾ ವಲಯದಲ್ಲೂ ಇಳಿಕೆ ಮಾಡಲಾಗಿದೆ. ಎಲ್ಲಾ ಸರ್ಕಾರಗಳ ಸಹಕಾರದಿಂದ ಒಮ್ಮತದ ನಿರ್ಧಾರ ಮಾಡಲಾಗಿದೆ. ಪಕ್ಷಾತೀತವಾಗಿ ಒಮ್ಮತದ ಈ ತೀರ್ಮಾನಕ್ಕೆ ಬರಲಾಗಿದೆ. ಇದು ಭಾರತದ ಮತ್ತೊಂದು ಶಕ್ತಿಯಾಗಿದೆ. ತೆರಿಗೆ ಕಡಿತಗೊಳಿಸಿದ ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಜಿಎಸ್‌ಟಿ ಕಡಿತಿದಿಂದಾಗಿ ರಾಜ್ಯದ ಜಿಡಿಪಿ ವೃದ್ಧಿಗೂ ಅನುಕೂಲಕರವಾಗಲಿದೆ. ತಾತ್ಕಾಲಿಕವಾಗಿ ಆದಾಯ ಕಡಿಮೆ ಆಗಬಹುದು. ವಾರ್ಷಿಕವಾಗಿ 48 ಸಾವಿರ ಕೋಟಿ ಕಡಿಮೆ ಆಗಬಹುದೆಂದು ಅಂದಾಜು ಇದೆ. ಆದರೇ ಭವಿಷ್ಯದಲ್ಲಿ ಇದು ಲಾಭ ತಂದುಕೊಡಲಿದೆ. ಜಿಎಸ್‌ಟಿ ಪರಿಹಾರದ ವಿಚಾರ ಯಾವುದೇ ಕಾರಣಕ್ಕೂ ಉದ್ಭವವಾಗಲ್ಲ. ಜಿಎಸ್‌ಟಿ ಕಡಿತಗೊಳಿಸುವುದಕ್ಕೆ ಎಲ್ಲಾ ರಾಜ್ಯದವರೂ ಒಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.


















