ಹುಬ್ಬಳ್ಳಿ: ಸಾಧು ಸಂತರ ಮೇಲೆ ಹಲ್ಲೆ, ದೌರ್ಜನ್ಯ, ಧರ್ಮಸ್ಥಳ ಕ್ಷೇತ್ರದ ಮೇಲಿನ ಷಡ್ಯಂತ್ರವನ್ನು ಒಳಗೊಂಡಂತೆ ಹಲವು ವಿಚಾರಗಳ ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿ ಯಶಸ್ವಿಯಾಗಿದ್ದು, ಕಲುಷಿತಗೊಂಡಿರುವ ಧರ್ಮಸ್ಥಳದ ವಾತಾವರಣ ಶುದ್ಧಿಗಾಗಿ ಸೆ.10 ರಂದು ಪ್ರತಿ ತಾಲೂಕುಗಳಿಂದ ಸಾಧು ಸಂತರು ಧರ್ಮಸ್ಥಳ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರೂರಿನ ನವಗ್ರಹ ತೀರ್ಥದ ಶ್ರೀ ಗುಣಧರನಂದಿ ಮಹಾರಾಜ ತಿಳಿಸಿದ್ಧಾರೆ.
ಇಂದು (ಗುರುವಾರ, ಸೆ.04) ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಗುಣಧರನಂದಿ ಮಹಾರಾಜ ಅವರು, ಸಾಧು ಸಂತರು, ಮಠಾಧೀಶರ ನಿಯೋಗ ನಿನ್ನೆ(ಬುಧವಾರ) ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿ, ಇತ್ತೀಚಿಗೆ ಸಾಧು ಸಂತರ ಮೇಲೆ ಆಗುತ್ತಿರುವ ಹಲ್ಲೆ, ಧಾರ್ಮಿಕ ಕೇಂದ್ರಗಳ ಮೇಲಿನ ದೌರ್ಜನ್ಯ ಮತ್ತು ಮಾನಹರಣ ಹಾಗೂ ಧರ್ಮಸ್ಥಳ ಕ್ಷೇತ್ರದ ಮೇಲಿನ ಷಡ್ಯಂತ್ರದ ಬಗ್ಗೆ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆಹಾರ ಸಚಿವ ಪ್ರಹ್ಲಾದ ಜೋಶಿ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಿ ಈ ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಈ ಸಂಬಂಧಿಸಿದಂತೆ ಸಕರಾತ್ಮಕ ಸ್ಪಂದನೆ ವ್ಯಕ್ತವಾಗಿದೆ ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮಾನಹರಣ ಮಾಡುವಂತಹ ಪ್ರವೃತ್ತಿ ಹೆಚ್ಚಾಗುತ್ತಿದೆ. ಯೂಟ್ಯೂಬ್ ಗಳ ಮೇಲೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾನೂನು ತರಬೇಕು ಎಂದು ತಿಳಿಸಲಾಗಿದೆ. ಧರ್ಮ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಕೆಲವು ಹೊಸ ಕಾನೂನು ಜಾರಿಗೆ ತರುವ ಕುರಿತಾಗಿ ಸಚಿವರು ಒಲವು ತೋರಿದ್ದಾರೆ. ಧರ್ಮಸ್ಥಳ ಪ್ರಕರಣದ ಬಗ್ಗೆ ಎರಡು ವರದಿಗಳು ರಾಜ್ಯ ಸರಕಾರದಿಂದ ತರಿಸಿಕೊಂಡಿದ್ದೇವೆ. ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಭರವಸೆ ನೀಡಿರುವುದಾಗಿ ಎಂದು ಹೇಳಿದ್ದಾರೆ.
ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಮಲೆಮಹಾದೇಶ್ವರ ಬೆಟ್ಟದ ಸಾಲೂರು ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಗುರುದೇವ ಆಶ್ರಮದ ಆತ್ಮರಾಮ ಸ್ವಾಮೀಜಿ, ಚಿತ್ರದುರ್ಗದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಪೀಠಾಧಿಪತಿಗಳು ನಿಯೋಗದಲ್ಲಿದ್ದರು ಎಂದು ತಿಳಿಸಿದರು.
ಧರ್ಮಸ್ಥಳ ಕ್ಷೇತ್ರದ ಮೇಲೆ ಹಲವು ಷಡ್ಯಂತ್ರ ರೂಪಿಸಿರುವುದು ಬಹಿರಂಗವಾಗಿದೆ. ಅಲ್ಲಿನ ವಾತಾವರಣವನ್ನು ಅಶುದ್ದಿಗೊಳಿಸಿದ್ದಾರೆ. ಹೀಗಾಗಿ ರಾಜ್ಯದ ಎಲ್ಲಾ ತಾಲೂಕುಗಳಿಂದ ಸಾಧು ಸಂತರು ಸೆ.10 ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮೀಜಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಧಾರ್ಮಿಕ ರಕ್ಷಣೆಗಾಗಿ ಕೇಂದ್ರ ಸರ್ಕಾರ ಖಡಕ್ ಕಾನೂನು ಜಾರಿಯಾಗಬೇಕು ಎಂದು ಆಗ್ರಹಿಸಿದ್ದಾರೆ.


















