ಇತ್ತೀಚಿನ ದಿನಗಳಲ್ಲಿ ಥಿಯೇಟರ್ ಗೆ ತೆರಳಿ ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗಿದೆ. ಕೆಲವರು ಸಿನಿಮಾ ಚೆನ್ನಗಿಲ್ಲಾ ಅಥವಾ ತಮ್ಮ ನಟನ ಸಿನಿಮಾ ಅಲ್ಲಾ ಅಂತಾನೋ ನೆಗ್ಲೆಟ್ ಮಾಡಿದರೆ ಇನ್ನು ಕೆಲವರು ಸಿನಿಮಾ ಎಷ್ಟೇ ಚೆನ್ನಾಗಿದ್ದರೂ ಇನ್ನೇನು ಟಿವಿಲೇ ಬರುತ್ತದೆ ಅಲ್ವಾ ಅಂತಾ ಸುಮ್ಮನಾಗುತ್ತಾರೆ. ಇದರಿಂದಾಗಿ ಕೋಟ್ಯಾಂತರ ರೂ. ಬಂಡವಾಳ ಹಾಕಿದ ನಿರ್ಮಾಪಕರು ಬೀದಿಗೆ ಬರುತ್ತಿದ್ದಾರೆ.
ಇನ್ನು ಕೆಲವರು ಇದರಿಂದ ಬೇಸರ ಹೊರಹಾಕುತ್ತಿರುತ್ತಾರೆ. ಅದೇ ರೀತಿ ವಸಿಷ್ಠಸಿಂಹ, ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ‘ಬಾರ್ಬರಿಕ್’ ಹೆಸರಿನ ತೆಲುಗು ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆಯಾಗಿ, ಅಷ್ಟೇನು ಯಶಸ್ಸು ಕಂಡಿಲ್ಲ. ಇದೀಗ ‘ಬಾರ್ಬರಿಕ್ ಚಿತ್ರದ ನಿರ್ದೇಶಕ ಮೋಹನ್ ಶ್ರೀವತ್ಸ ವಿಡೀಯೋ ಮಾಡಿದ್ದು ಚಪ್ಪಲಿಯಿಂದ ಹೊಡೆದುಕೊಂಡಿದ್ದಾರೆ.

ವಿಡಿಯೋದಲ್ಲಿ ‘ನಾನು ಚಿತ್ರಮಂದಿರಕ್ಕೆ ಹೋಗಿದ್ದೆ ಕೇವಲ 10 ಜನ ಅಲ್ಲಿದ್ದರು. ನಾನೇ ಆ ಸಿನಿಮಾ ನಿರ್ದೇಶಕ ಎಂದು ಹೇಳದೆ, ಸಿನಿಮಾ ಹೇಗಿದೆ ಎಂದು ಕೇಳಿದೆ. ಎಲ್ಲರೂ ಸಿನಿಮಾ ಚೆನ್ನಾಗಿದೆ ಎಂದೇ ಹೇಳಿದರು. ಸಿನಿಮಾ ಚೆನ್ನಾಗಿದ್ದರೂ ಏಕೆ ಜನ ಬರುತ್ತಿಲ್ಲ. ಸಿನಿಮಾ ನೋಡಿ ಇಷ್ಟವಾಗದೇ ಇದ್ದರೆ ಒಪ್ಪಿಕೊಳ್ಳುತ್ತೇನೆ. ಏನೂ ಕಾರಣವೇ ಇಲ್ಲದೆ ಚಿತ್ರಮಂದಿರಕ್ಕೆ ಬರದಿದ್ದರೆ ನನ್ನ ಸಿನಿಮಾ ಹೇಗಿದೆ ಎಂದು ನನಗೆ ಹೇಗೆ ಅರ್ಥವಾಗುತ್ತದೆ. ಅದೇ ಪರಭಾಷೆಯ ಸಿನಿಮಾಗಳನ್ನು ಮುಗಿಬಿದ್ದು ನೋಡುತ್ತೀರಿ. ಮಲಯಾಳಂ ಸಿನಿಮಾಗಳನ್ನು ನೋಡುತ್ತೀರಿ. ನಮ್ಮದೇ ಭಾಷೆಯ ಒಳ್ಳೆಯ ಸಿನಿಮಾ ಏಕೆ ನೋಡುತ್ತಿಲ್ಲ’ ಎಂದು ಮೋಹನ್ ಪ್ರಶ್ನಿಸಿದ್ದಾರೆ.
‘ನನಗೆ ಏನು ಮಾಡುವುದೋ ತೋಚುತ್ತಿಲ್ಲ ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಸಹ ಅನಿಸುತ್ತಿದೆ. ನೀವು ಪರಭಾಷೆ ಸಿನಿಮಾಗಳನ್ನೇ ನೋಡುತ್ತೀನಿ ಎಂದುವುದಾದರೆ ನಾನು ಮಲಯಾಳಂ ಚಿತ್ರರಂಗಕ್ಕೆ ಹೋಗಿ ಅಲ್ಲಿಯೇ ಸಿನಿಮಾ ಮಾಡುತ್ತೇನೆ. ನನ್ನ ಸಿನಿಮಾ ಜನರಿಗೆ ಇಷ್ಟವಾಗದಿದ್ದರೆ ನನ್ನ ಚಪ್ಪಲಿಯಲ್ಲಿ ನಾನೇ ಹೊಡೆದುಕೊಳ್ಳುತ್ತೇನೆ ಎಂದಿದ್ದೆ. ಈಗ ಹಾಗೆಯೇ ಮಾಡುತ್ತೇನೆ’ ಎಂದು ಹೇಳಿ ತಮ್ಮ ಚಪ್ಪಲಿಯಲ್ಲಿ ತಾವೇ ಹೊಡೆದುಕೊಂಡಿದ್ದಾರೆ.. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗಿದ್ದು, ನೆಟ್ಟಿಗರು ಬೇಸರ ಹೊರಹಾಕಿದ್ದಾರೆ.


















