ಕರ್ನಾಲ್: ಅತ್ಯಾಚಾರ ಮತ್ತು ವಂಚನೆ ಆರೋಪದ ಮೇಲೆ ಬಂಧಿತರಾಗಿದ್ದ ಪಂಜಾಬ್ ಆಮ್ ಆದ್ಮಿ ಪಕ್ಷದ (AAP) ಶಾಸಕ ಹರ್ಮಿತ್ ಸಿಂಗ್ ಪಠಾಣ್ಮಾಜ್ರಾ ಮಂಗಳವಾರ ಕರ್ನಾಲ್‌ನಲ್ಲಿ ಪೊಲೀಸರ ಮೇಲೆಯೇ ಗುಂಡು ಹಾರಿಸಿ, ಪೊಲೀಸ್ ವಶದಿಂದ ತಪ್ಪಿಸಿಕೊಂಡು ನಾಟಕೀಯವಾಗಿ ಪರಾರಿಯಾದ ಘಟನೆ ನಡೆದಿದೆ. ಈ ಘಟನೆಯಲ್ಲಿ ಒಬ್ಬ ಪೊಲೀಸ್ ಗಾಯಗೊಂಡಿದ್ದು, ಮತ್ತೋರ್ವ ಪೊಲೀಸ್ ಮೇಲೆಯೇ ಆರೋಪಿ ಶಾಸಕ ವಾಹನ ಹರಿಸಿದ್ದಾರೆ ಎಂದು ತಿಳಿದುಬಂದಿದೆ.
ಪಟಿಯಾಲಾದ ಸನೌರ್ ಕ್ಷೇತ್ರದ ಶಾಸಕರಾಗಿರುವ ಪಠಾಣ್ಮಾಜ್ರಾ ಅವರನ್ನು ಸ್ಥಳೀಯ ಠಾಣೆಗೆ ಕರೆದೊಯ್ಯುತ್ತಿದ್ದಾಗ, ಅವರು ಮತ್ತು ಅವರ ಸಹಚರರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಈ ಗದ್ದಲದಲ್ಲಿ, ಶಾಸಕರು ಸ್ಕಾರ್ಪಿಯೋ ಎಸ್‌ಯುವಿಯಲ್ಲಿ ತಮ್ಮ ಸಹಚರರೊಂದಿಗೆ ಪರಾರಿಯಾಗಿದ್ದಾರೆ. ಪರಾರಿಯಾಗಲು ಬಳಸಿದ್ದ ಫಾರ್ಚುನರ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಆರೋಪಿಗಳಿಗಾಗಿ ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಜಿರಕ್‌ಪುರ ಮೂಲದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪಠಾಣ್ಮಾಜ್ರಾ ಅವರನ್ನು ಬಂಧಿಸಲಾಗಿತ್ತು. ಶಾಸಕರು ತಾವು ವಿಚ್ಛೇದಿತ ಎಂದು ಸುಳ್ಳು ಹೇಳಿ ತಮ್ಮೊಂದಿಗೆ ಲೈಂಗಿಕ ಸಂಬಂಧ ಬೆಳೆಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ, 2021ರಲ್ಲಿ ಮೊದಲ ಪತ್ನಿ ಇರುವಾಗಲೇ ತಮ್ಮನ್ನು ಮದುವೆಯಾಗಿ, ಲೈಂಗಿಕವಾಗಿ ಬಳಸಿಕೊಂಡು, ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಅತ್ಯಾಚಾರ, ವಂಚನೆ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ರಾಜಕೀಯ ತಿರುವು
ಆದಾಗ್ಯೂ, ಈ ಪ್ರಕರಣ ರಾಜಕೀಯ ಪ್ರೇರಿತ ಎಂದು ಶಾಸಕ ಪಠಾಣ್ಮಾಜ್ರಾ ಆರೋಪಿಸಿದ್ದಾರೆ. ಎಫ್‌ಐಆರ್ ದಾಖಲಾದ ನಂತರ ಫೇಸ್‌ಬುಕ್ ಲೈವ್ ಬಂದಿದ್ದ ಅವರು, “ಪಂಜಾಬ್ ಅನ್ನು ದೆಹಲಿ ನಾಯಕತ್ವವು ಅಕ್ರಮವಾಗಿ ಆಳುತ್ತಿದೆ. ನಾನು ಧ್ವನಿ ಎತ್ತಿದ್ದಕ್ಕಾಗಿ ನನ್ನನ್ನು ಗುರಿಯಾಗಿಸಲಾಗುತ್ತಿದೆ. ಅವರು ನನ್ನ ವಿರುದ್ಧ ಎಫ್‌ಐಆರ್ ಹಾಕಬಹುದು, ನಾನು ಜೈಲಿನಲ್ಲಿ ಇರಬಲ್ಲೆ, ಆದರೆ ನನ್ನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ,” ಎಂದು ಹೇಳಿದ್ದರು.
ಇತ್ತೀಚೆಗೆ, ಪಟಿಯಾಲದಲ್ಲಿನ ಪ್ರವಾಹ ನಿರ್ವಹಣೆ ವಿಚಾರವಾಗಿ ಪಠಾಣ್ಮಾಜ್ರಾ ತಮ್ಮದೇ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ನದಿಗಳಲ್ಲಿ ಹೂಳು ತೆಗೆಯಲು ಪದೇ ಪದೇ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಪ್ರವಾಹದ ಹಾನಿ ಹೆಚ್ಚಾಗಿದೆ ಎಂದು ಅವರು ಆರೋಪಿಸಿದ್ದರು. ಇದರ ಪ್ರತೀಕಾರವಾಗಿ ತಮ್ಮ ಭದ್ರತೆಯನ್ನು ಹಿಂಪಡೆಯಲಾಗಿದೆ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದೂ ಅವರು ದೂರಿದ್ದರು.