ಹರ್ದೋಯಿ: ಸರಿಸುಮಾರು ಏಳು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ತನ್ನ ಪತಿಯನ್ನು ಮಹಿಳೆಯೊಬ್ಬರು ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ಪತ್ತೆಹಚ್ಚಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮತ್ತೊಬ್ಬ ಮಹಿಳೆಯೊಂದಿಗೆ ರೀಲ್ಸ್‌ನಲ್ಲಿ ಕಾಣಿಸಿಕೊಂಡಿದ್ದ ಪತಿ, ತಾನು ನಾಪತ್ತೆಯಾಗಿರುವುದಾಗಿ ನಾಟಕವಾಡಿ ಎರಡನೇ ಮದುವೆಯಾಗಿದ್ದ ಸತ್ಯ ಈಗ ಬಯಲಾಗಿದೆ.
ಹರ್ದೋಯಿ ನಿವಾಸಿ ಶೀಲು ಎಂಬವರು 2017ರಲ್ಲಿ ಜಿತೇಂದ್ರ ಕುಮಾರ್ ಅಲಿಯಾಸ್ ಬಬ್ಲು ಎಂಬಾತನನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ಒಂದು ವರ್ಷದೊಳಗೆ, ಚಿನ್ನದ ಸರ ಮತ್ತು ಉಂಗುರಕ್ಕಾಗಿ ವರದಕ್ಷಿಣೆ ಕಿರುಕುಳ ಆರಂಭವಾಗಿತ್ತು. ಬೇಡಿಕೆ ಈಡೇರಿಸದಿದ್ದಾಗ ಶೀಲು ಅವರನ್ನು ಮನೆಯಿಂದ ಹೊರಹಾಕಲಾಯಿತು. ಇದರ ಬೆನ್ನಲ್ಲೇ, ಶೀಲು ಅವರ ಕುಟುಂಬವು ವರದಕ್ಷಿಣೆ ಕಿರುಕುಳದಡಿ ಜಿತೇಂದ್ರ ಕುಮಾರ್ ವಿರುದ್ಧ ದೂರು ದಾಖಲಿಸಿತ್ತು.
ವರದಕ್ಷಿಣೆ ಪ್ರಕರಣದ ತನಿಖೆ ನಡೆಯುತ್ತಿದ್ದಾಗಲೇ ಜಿತೇಂದ್ರ 2018ರಲ್ಲಿ ನಿಗೂಢವಾಗಿ ನಾಪತ್ತೆಯಾದ. ಆತನ ತಂದೆ ಮಗ ಕಾಣೆಯಾಗಿದ್ದಾನೆಂದು ದೂರು ನೀಡಿದ್ದರು. ಪೊಲೀಸರ ಹುಡುಕಾಟ ವಿಫಲವಾದಾಗ, ಜಿತೇಂದ್ರನ ಕುಟುಂಬಸ್ಥರು, ಶೀಲು ಮತ್ತು ಅವರ ಕುಟುಂಬದವರೇ ತಮ್ಮ ಮಗನನ್ನು ಕೊಂದು ಶವವನ್ನು ಮಾಯ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ರೀಲ್ಸ್‌ನಿಂದ ಬಯಲಾದ ಸತ್ಯ
ಕಳೆದ ಏಳು ವರ್ಷಗಳಿಂದ ಪತಿಯ ಸುಳಿವಿಗಾಗಿ ಕಾಯುತ್ತಿದ್ದ ಶೀಲು, ಇತ್ತೀಚೆಗೆ ಇನ್‌ಸ್ಟಾಗ್ರಾಂ ನೋಡುತ್ತಿದ್ದರು. ಆಗ ಅವರಿಗೆ ಅಚ್ಚರಿ ಕಾದಿತ್ತು. ಮೊಬೈಲ್ ನಲ್ಲಿ ರೀಲ್ಸ್ ನೋಡುವಾಗ, ತಮ್ಮ ಪತಿ ಮತ್ತೊಬ್ಬ ಮಹಿಳೆಯೊಂದಿಗೆ ರೀಲ್ಸ್ ನಲ್ಲಿ ಕಾಣಿಸಿಕೊಂಡಿರುವುದು ನೋಡಿ ಬೆಚ್ಚಿಬಿದ್ದಿದ್ದಾರೆ. ತಕ್ಷಣವೇ ಆತನನ್ನು ಗುರುತಿಸಿದ ಅವರು, ಈ ಬಗ್ಗೆ ಕೋತ್ವಾಲಿ ಸಂಡಿಲಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರ ತನಿಖೆಯ ವೇಳೆ, ಜಿತೇಂದ್ರನೇ ತನ್ನ ನಾಪತ್ತೆಯ ನಾಟಕವಾಡಿದ್ದು, ಲುಧಿಯಾನಕ್ಕೆ ತೆರಳಿ ಅಲ್ಲಿ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿ ಹೊಸ ಜೀವನ ಆರಂಭಿಸಿದ್ದಾನೆ ಎಂಬುದು ತಿಳಿದುಬಂದಿದೆ.
ಶೀಲು ಅವರ ದೂರು ಮತ್ತು ಸಾಮಾಜಿಕ ಮಾಧ್ಯಮದ ಸಾಕ್ಷ್ಯಾಧಾರದ ಮೇಲೆ ಜಿತೇಂದ್ರನನ್ನು ಬಂಧಿಸಲಾಗಿದೆ. ಆತನ ವಿರುದ್ಧ ದ್ವಿಪತ್ನಿತ್ವ, ವಂಚನೆ ಮತ್ತು ವರದಕ್ಷಿಣೆ ಕಿರುಕುಳದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಂಡಿಲಾ ಸರ್ಕಲ್ ಅಧಿಕಾರಿ ಸಂತೋಷ್ ಸಿಂಗ್ ಖಚಿತಪಡಿಸಿದ್ದಾರೆ. ಸದ್ಯ ಆರೋಪಿಯನ್ನು ಸಂಡಿಲಾ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ.