ದಾವಣಗೆರೆ: ಮಟ್ಟಿಕಲ್ ನಲ್ಲಿ ಛತ್ರಪತಿ ಶಿವಾಜಿ ಅಫ್ಜಲ್ ಖಾನ್ ಕೊಲ್ಲುವ ಪ್ಲೆಕ್ಸ್ ಹಾಕಿದ್ದ ವಿಚಾರವಾಗಿ “ಯಾರೆ ಕಾಲು ಕೆರೆದು ಗಲಾಟೆ ಮಾಡಿದರೆ ಸುಮ್ಮನೆ ಇರುವುದಿಲ್ಲ, ಒದ್ದು ಒಳಗೆ ಹಾಕಿಸುತ್ತೇನೆ” ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಖಾರವಾಗಿಯೇ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ್, ಮುಸ್ಲಿಮರು ಇರುವ ಜಾಗದಲ್ಲೆ ಫ್ಲೆಕ್ಸ್ ಹಾಕುವ ಉದ್ದೇಶ ಏನಿತ್ತು. ಅಲ್ಲದೇ ಮುಸ್ಲಿಂ ಹಬ್ಬದ ದಿನವೇ ಗಣೇಶ ಯಾಕೆ ಬಿಡಬೇಕು ಎಂದು ಪ್ರಶ್ನೆ ಮಾಡಿದ್ದಲ್ಲದೇ, 1994 ಘಟನೆ ಮರುಕಳಿಸುವುದು ಬೇಡ. ಎಲ್ಲರೂ ಒಂದಾಗಿ ಇದ್ದಾರೆ, ಇದರಿಂದ ರಾಜಕೀಯ ಬೆಳೆ ಬೇಯಿಸಿಕೊಳ್ಳುವುದು ಬೇಡ ಎಂದು ತಿಳಿಸಿದ್ದಾರೆ.
ಡಿಜೆ ಬ್ಯಾನ್ ಆಗಲು ರೇಣುಕಾಚಾರ್ಯ ಹಠ ಮಾಡಿ, ಅಧಿಕಾರಿಗಳ ಮೇಲೆ ಬಾಯಿಗೆ ಬಂದ ರೀತಿಯಲ್ಲಿ ಮಾತನಾಡಿದ್ದಾರೆ. ಆದ್ದರಿಂದ ಅಧಿಕಾರಿಗಳು ಬೇಸರಗೊಂಡು ಬ್ಯಾನ್ ಮಾಡಿದ್ದಾರೆ. ಡಿಜೆ ಬ್ಯಾನ್ ಆಗಿದ್ದರಿಂದ ಕಲಾವಿದರು ಬಹಳ ಖುಷಿಯಾಗಿದ್ದಾರೆ ಹಾಗೂ ಜನರು ನೆಮ್ಮದಿಯಿಂದ ಇದ್ದಾರೆ. ಆದರೆ ಒಂದು ಕಡೆ ಡಿಜೆಗೆ ಬಂಡವಾಳ ಹಾಕಿರುವವರಿಗೆ ದುಃಖ ಆಗಿದ್ದು, ಡಿಜೆ ಅವರಿಗೆ ಬೇರೆ ಕೆಲಸ ನೋಡಿಕೋಳ್ಳಿ ಎಂದು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.