ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರನಾಗಿದ್ದು ಈಗ ಆರೋಪಿಯಾಗಿ ಪ್ರಸ್ತುತ ಬಂಧನದಲ್ಲಿರುವ ಚಿನ್ನಯ್ಯನನ್ನು ಬೆಂಗಳೂರಿನಲ್ಲಿ ಸ್ಥಳ ಮಹಜರು ನಡೆಸಿದ ಬಳಿಕ ಮತ್ತೆ ಬೆಳ್ತಂಗಡಿಗೆ ಕರೆತರಲಾಗಿದೆ. ಇಂದಿನಿಂದ (ಸೋಮವಾರ) ಎರಡನೇ ಹಂತದ ವಿಚಾರಣೆ ಆರಂಭವಾಗಲಿದೆ.
ಚಿನ್ನಯ್ಯನನ್ನು ಆ.30ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿಗೆ ಕರೆದೊಯ್ದಿದ್ದ ಎಸ್‌ಐಟಿ ತಂಡ ಈತನಿಗೆ ಆಶ್ರಯ ನೀಡಿದ್ದ ಜಯಂತ್ ಟಿ. ಹಾಗೂ ಗಿರೀಶ್ ಮಟ್ಟಣ್ಣನವರ್ ಮನೆಯಲ್ಲಿ ಶೋಧ ನಡೆಸಿತ್ತು.
ಆ. 23ರಂದು ಚಿನ್ನಯ್ಯನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಸೆ. 3ರವರೆಗೆ ಅಂದರೆ 12 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ಪಡೆದಿತ್ತು. ಹಾಗಾಗಿ ಸೆ. 3ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ. ತನಿಖೆಗೆ ಇನ್ನಷ್ಟು ದಿನಗಳು ಬೇಕಾಗುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಕಾಲಾವಕಾಶ ಕೇಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಎಸ್‌ಐಟಿ ಅಧಿಕಾರಿಗಳು ಚಿನ್ನಯ್ಯನನ್ನು ಕರೆದೊಯ್ದು ಮಹಜರು ನಡೆಸಿದ ವಿಚಾರವಾಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಜಯಂತ್, ಎಸ್‌ಐಟಿ ಶೋಧ ನಡೆಸುತ್ತಿರುವುದನ್ನು ಒಪ್ಪುತ್ತೇನೆ. ನಮ್ಮ ಮನೆಯವರು ಇರುವ ಎಲ್ಲ ವಿಚಾರಗಳನ್ನು ಎಸ್‌ಐಟಿಗೆ ತಿಳಿಸಿದ್ದಾರೆ ಎಂದಿದ್ದಾರೆ.


















