ಉಡುಪಿ : ಅಜ್ಜರಕಾಡಿನ ಡಾ | ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಭಾಂಗಣದಲ್ಲಿ ನಡೆದ ಸತತ 216 ಗಂಟೆಗಳ ಕಾಲ ಭರತನಾಟ್ಯ ಪ್ರದರ್ಶನ ಮಾಡುವುದು ಮುಖೇನ ವಿಶ್ವ ದಾಖಲೆ ಬರೆದ ವಿದುಷಿ ದೀಕ್ಷಾ ವಿ. ಅವರಿಗೆ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ಡಾ| ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ನಾಡೋಜ ಡಾ| ಜಿ. ಶಂಕರ್ ಅವರು ಚಿನ್ನದ ಖಡಗ ತೊಡಿಸಿ ಸಮ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ| ಜಿ. ಶಂಕರ್, ವಿದುಷಿ ದೀಕ್ಷಾ ಡಾ| ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಹಳೆವಿದ್ಯಾರ್ಥಿ ಆಗಿದ್ದು, ಸಾಧನೆಯ ಮೂಲಕ ನಮಗೆ ಹೆಮ್ಮೆ ತಂದಿದ್ದಾರೆ. ಅವರು ಅವಿರತವಾಗಿ 216 ಗಂಟೆಗಳ ಕಾಲ ನಿದ್ದೆ ಬಿಟ್ಟು ಈ ದೊಡ್ಡ ಸಾಧನೆ ಮಾಡುವ ಮೂಲಕ ಇಡೀ ರಾಜ್ಯದ ಜನತೆ ಖುಷಿ ಪಡುವಂತೆ ಮಾಡಿದ್ದಾರೆ. ಮುಂದೆಯೂ ಅವರು ಇನ್ನಷ್ಟು ಹೆಚ್ಚಿನ ಸಾಧನೆಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್‌ಪಾಲ್ ಎ. ಸುವರ್ಣ, ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಕೆ. ರಘುಪತಿ ಭಟ್, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ಟ್ರಸ್ಟ್ ನ ಪ್ರಮುಖರಾದ ಶಾಲಿನಿ ಶಂಕರ್, ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್, ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಡಾ| ರೋಶನ್ ಕುಮಾರ್ ಶೆಟ್ಟಿ, ಗೀತಾಂಜಲಿ ಎಂ. ಸುವರ್ಣ, ಕಿಶೋರ್ ಕುಮಾರ್, ಮಹೇಶ್ ಠಾಕೂರ್ ಮತ್ತಿತರರು ಉಪಸ್ಥಿತರಿದ್ದರು.