ನವದೆಹಲಿ: ಜನಾಂಗೀಯ ಹಿಂಸಾಚಾರ ಪೀಡಿತ ಕಣಿವೆ ರಾಜ್ಯ ಮಣಿಪುರಕ್ಕೆ ಸದ್ಯದಲ್ಲೇ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಸಾಧ್ಯತೆಯಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಪಿಎಂ ಕಚೇರಿಯ ಮೂಲಗಳ ಮಾಹಿತಿಯ ಆಧಾರದ ಮೇಲೆ ವರದಿ ಮಾಡಿವೆ.
ಈಶಾನ್ಯ ಕಣಿವೆ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದು ಬರೋಬ್ಬರಿ 28 ತಿಂಗಳ ಬಳಿಕ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ.
ಸೆಪ್ಟೆಂಬರ್ 12ರಿಂದ 14ರವರೆಗೆ ಮಿಜೋರಾಂ ಹಾಗೂ ಅಸ್ಸಾಂ ರಾಜ್ಯದೊಂದಿಗೆ ಮಣಿಪುರ ಪ್ರವಾಸವನ್ನು ಪ್ರಧಾನಿ ಕೈಗೊಳ್ಳುವ ಸಾಧ್ಯತೆಯಿದ್ದು, ಭೇಟಿಯ ಸಂದರ್ಭದಲ್ಲಿ ಪ್ರಮುಖ ಮೂಲಸೌಕರ್ಯಗಳನ್ನು ಮೋದಿ ಉದ್ಘಾಟಿಸುವ ನಿರೀಕ್ಷೆಯಿದೆ.
ಈ ಸಂದರ್ಭದಲ್ಲಿ ರಾಜಧಾನಿ ಇಂಫಾಲ ಹಾಗೂ ಚುರಾಚಾಂದ್‌ಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡುವ ಸಾಧ್ಯತೆಯೂ ಇದೆ.
ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭದ್ರತೆ ಬಿಗಿಗೊಳಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರದಲ್ಲಿ 2023ರ ಮೇ 3ರಂದು ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ ಆರಂಭವಾಗಿತ್ತು. ಆದರೆ ಕಳೆದೆರಡು ತಿಂಗಳಲ್ಲಿ ಹಿಂಸಾಚಾರದ ಯಾವುದೇ ಘಟನೆಗಳು ವರದಿಯಾಗಿಲ್ಲ.
ಫೆಬ್ರವರಿ 13ರಂದು ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಇನ್ನೊಂದೆಡೆ ಪ್ರಧಾನಿ ಭೇಟಿ ನೀಡದೇ ಇರುವುದನ್ನು ಕಾಂಗ್ರೆಸ್ ಸೇರಿ ವಿಪಕ್ಷಗಳು ನಿರಂತರವಾಗಿ ಟೀಕೆ ಮಾಡುತ್ತಲೇ ಬಂದಿವೆ.



















