ಬೆಂಗಳೂರು : ಯಾವುದಾದರು ಹಬ್ಬ ಹರಿದಿನ ಬಂತೆಂದರೆ ಮಾಂಸದಂಗಡಿ, ಮಧ್ಯ ಮಾರಾಟವನ್ನು ನಿಷೇಧಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಗೌರಿ ಗಣೇಶ ಹಬ್ಬದ ಸಂಭ್ರಮ ಇನ್ನು ಮುಗಿದಿಲ್ಲ. ಅಂದರೆ, ಹಬ್ಬ ಮುಗಿದಿದೆ ಆದರೆ, ವಿಸರ್ಜನೆ ಕ್ರಿಯೆ ಬಾಕಿ ಇದೆ. ಕೆಲವೊಂದು ಕಡೆ ಗಣೇಶ ಪ್ರತಿಷ್ಠಾಪಿಸಿದ 3ನೇ ದಿನಕ್ಕೆ ವಿಸರ್ಜನೆ ಮಾಡಿದರೆ ಇನ್ನು ಕೆಲವು ಕಡೆ 5ನೇ ದಿನಕ್ಕೆ ವಿಸರ್ಜನೆ ಮಾಡಲಾಗುತ್ತದೆ.
ನಾಳೆ ಸಾಮಾನ್ಯವಾಗಿ ಬಹುತೇಕ ಕಡೆ ಗಣೇಶ ವಿಸರ್ಜನೆ ಮಾಡುತ್ತಾರೆ. ಯಾಕೆಂದರೆ ಆಗಸ್ಟ್ 31 ಅಂದರೆ ನಾಳೆಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಐದು ದಿನ ಆಗುತ್ತದೆ. ಜೊತೆಗೆ ಭಾನುವಾರ ಆಗಿರುವುದರಿಂದ ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮಗಳು ನಡೆಯುತ್ತಿವೆ.
ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆಗಸ್ಟ್ 31ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾಮೂಹಿಕ ಗಣೇಶ ಮೂರ್ತಿಗಳು ವಿಸರ್ಜನೆ ನಡೆಯುವುದರಿಂದ ಕಿಡಿಗೇಡಿಗಳು ಮಧ್ಯ ಸೇವಿಸಿ ಗಲಾಟೆ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ. ಜೊತೆಗೆ ಪ್ರತಿಯೊಂದು ಏರಿಯಾಗಳಲ್ಲೂ ಗಣೇಶ ಮೂರ್ತಿ ವಿಸರ್ಜನೆಗೆ ಎಂದೇ ದೊಡ್ಡ ಲಾರಿಯಲ್ಲಿ ಟಾರ್ಪಲ್ ಹಾಕಿ ನೀರು ತುಂಬಿಸಿದ್ದಾರೆ. ಅಲ್ಲಿಯೇ ಹೋಗಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಬೇಕೆಂದು ಆದೇಶ ಹೊರಡಿಸಲಾಗಿದೆ.
ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ, ಗೋವಿಂದಪುರ, ಬಾಣಸವಾಡಿ, ರಾಮಮೂರ್ತಿನಗರ, ಹೆಣ್ಣೂರು, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಭಾರತಿನಗರ, ಪುಲಿಕೇಶಿನಗರ, ಹಲಸೂರು, ಯಶವಂತಪುರ, ಸಂಜಯನಗರ, ಜಾಲಹಳ್ಳಿ, ಆರ್‌ಎಂಸಿ ಯಾರ್ಡ್, ಜೆ.ಸಿ. ನಗರ, ಆರ್.ಟಿ. ನಗರ, ಹೆಬ್ಬಾಳ, ಸದಾಶಿವನಗರ, ತಲಘಟ್ಟಪುರ, ಸುಬ್ರಹ್ಮಣ್ಯಪುರ, ಕೆಂಗೇರಿ, ಜ್ಞಾನಭಾರತಿ, ಕುಂಬಳಗೋಡುವಿನಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.



















