ನವದೆಹಲಿ: ಟೆಕ್ ದೈತ್ಯ ಸ್ಯಾಮ್‌ಸಂಗ್ ತನ್ನ ಬಹುನಿರೀಕ್ಷಿತ ‘ಗ್ಯಾಲಕ್ಸಿ ಅನ್‌ಪ್ಯಾಕ್ಡ್’ (Galaxy Unpacked) ಕಾರ್ಯಕ್ರಮವನ್ನು ಸೆಪ್ಟೆಂಬರ್ 4 ರಂದು ಆಯೋಜಿಸುವುದಾಗಿ ಖಚಿತಪಡಿಸಿದೆ. IFA 2025 ಆರಂಭವಾಗುವ ಒಂದು ದಿನದ ಮುಂಚೆ ನಡೆಯಲಿರುವ ಈ ಆನ್‌ಲೈನ್ ಕಾರ್ಯಕ್ರಮದಲ್ಲಿ, ಹೊಸ S25 ಸರಣಿಯ ಸಾಧನಗಳು ಮತ್ತು ಟ್ಯಾಬ್ಲೆಟ್‌ಗಳನ್ನು ಪರಿಚಯಿಸಲಾಗುವುದು. ಗ್ಯಾಲಕ್ಸಿ S25 FE ಮತ್ತು ಗ್ಯಾಲಕ್ಸಿ ಟ್ಯಾಬ್ S11 ಸರಣಿಗಳು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿರಲಿವೆ ಎಂದು ನಿರೀಕ್ಷಿಸಲಾಗಿದೆ.
‘ಗ್ಯಾಲಕ್ಸಿ ಅನ್‌ಪ್ಯಾಕ್ಡ್’ ಕಾರ್ಯಕ್ರಮದ ನೇರ ಪ್ರಸಾರವನ್ನು ಸೆಪ್ಟೆಂಬರ್ 4 ರಂದು ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಯಿಂದ ಸ್ಯಾಮ್‌ಸಂಗ್‌ನ ಅಧಿಕೃತ ವೆಬ್‌ಸೈಟ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ವೀಕ್ಷಿಸಬಹುದು.
ಸ್ಯಾಮ್‌ಸಂಗ್‌ನ ಫ್ಯಾನ್ ಎಡಿಷನ್ (FE) ಸರಣಿಯು ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಫೀಚರ್‌ಗಳನ್ನು ನೀಡುವುದಕ್ಕೆ ಹೆಸರುವಾಸಿಯಾಗಿದೆ. S25 FE ಕೂಡ ಇದೇ ಹಾದಿಯಲ್ಲಿ ಸಾಗುವ ನಿರೀಕ್ಷೆಯಿದೆ.
ಪೋರ್ಚುಗೀಸ್ ರಿಟೇಲರ್ ಮೀಡಿಯಾಮಾರ್ಕ್ಟ್‌ನಲ್ಲಿ ಸೋರಿಕೆಯಾದ ಮಾಹಿತಿಯ ಪ್ರಕಾರ, ಈ ಫೋನ್ 6.7-ಇಂಚಿನ 1080×2340 AMOLED ಡಿಸ್ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಹೊಂದಿರಲಿದೆ. S25 ಸರಣಿಯ ಇತರ ಫೋನ್‌ಗಳಲ್ಲಿರುವ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಬದಲು, S25 FE ಸ್ಯಾಮ್‌ಸಂಗ್‌ನದೇ ಆದ Exynos 2400 ಪ್ರೊಸೆಸರ್ ಅನ್ನು ಹೊಂದಿರಲಿದೆ. S24 FE ನಲ್ಲಿರುವಂತೆಯೇ ಟ್ರಿಪಲ್ ಕ್ಯಾಮೆರಾ ಸೆಟಪ್ ಇರಲಿದ್ದು, 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 12-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಮತ್ತು 8-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಇರಲಿದೆ. 4,900mAh ಸಾಮರ್ಥ್ಯದ ಬ್ಯಾಟರಿ ಮತ್ತು 45W ವೇಗದ ಚಾರ್ಜಿಂಗ್ ಬೆಂಬಲವಿರಲಿದೆ. ಇದರ ಬೆಲೆ ಸುಮಾರು $789.99 (ಸುಮಾರು ₹81,000) ಇರಬಹುದು ಎಂದು ಅಂದಾಜಿಸಲಾಗಿದೆ.
ಹೊಸ ಡಿಸ್ಪ್ಲೇ
ಈ ಕಾರ್ಯಕ್ರಮದಲ್ಲಿ ಗ್ಯಾಲಕ್ಸಿ ಟ್ಯಾಬ್ S11 ಮತ್ತು ಟ್ಯಾಬ್ S11 ಅಲ್ಟ್ರಾ ಕೂಡ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸ್ಟ್ಯಾಂಡರ್ಡ್ ಮಾದರಿಯು 11-ಇಂಚಿನ ಡಿಸ್ಪ್ಲೇ ಹೊಂದಿದ್ದರೆ, ಅಲ್ಟ್ರಾ ಮಾದರಿಯು 14.6-ಇಂಚಿನ ಬೃಹತ್ ಡಿಸ್ಪ್ಲೇ ಹೊಂದಿರಲಿದೆ. ಈ ಟ್ಯಾಬ್ಲೆಟ್‌ಗಳು ಮೀಡಿಯಾಟೆಕ್ 9400 ಪ್ಲಸ್ ಚಿಪ್‌ನಿಂದ ಚಾಲಿತವಾಗುವ ನಿರೀಕ್ಷೆಯಿದೆ. ಟ್ಯಾಬ್ S11 ಅಲ್ಟ್ರಾದಲ್ಲಿ 11,600mAh ಮತ್ತು ಸ್ಟ್ಯಾಂಡರ್ಡ್ ಮಾದರಿಯಲ್ಲಿ 8400mAh ಬ್ಯಾಟರಿ ಇರಲಿದೆ. ಟ್ಯಾಬ್ S11 ಅಲ್ಟ್ರಾ ಬೆಲೆ ಸುಮಾರು $1,200 (ಸುಮಾರು ₹1,05,000) ಮತ್ತು ಟ್ಯಾಬ್ S11 ಬೆಲೆ ಸುಮಾರು $860 (ಸುಮಾರು ₹75,400) ಇರಬಹುದು ಎಂದು ನಿರೀಕ್ಷಿಸಲಾಗಿದೆ. ಇದರೊಂದಿಗೆ, ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಸಾಧನಗಳಿಗೆ ಮತ್ತಷ್ಟು ಹೊಸ AI ಚಾಲಿತ ಫೀಚರ್‌ಗಳನ್ನು ಪರಿಚಯಿಸುವ ಸುಳಿವನ್ನು ನೀಡಿದೆ.



















