ಬೆಂಗಳೂರು: ಮೆಡಿಕಲ್ ಕೌನ್ಸೆಲಿಂಗ್ ಕಮಿಟಿಯು (MCC NEET UG Counselling 2025) ವೈದ್ಯಕೀಯ ಕೋರ್ಸ್ ಗಳ ಪ್ರವೇಶಾತಿಗಾಗಿ ನಡೆಯುವ ನೀಟ್ ಯುಜಿಯ 2ನೇ ಸುತ್ತಿನ ಕೌನ್ಸೆಲಿಂಗ್ ದಿನಾಂಕ ಘೋಷಣೆ ಮಾಡಿದೆ. ಆಗಸ್ಟ್ 29ರಿಂದ ಕೌನ್ಸೆಲಿಂಗ್ ಗೆ ನೋಂದಣಿ ಆರಂಭವಾಗಲಿದೆ. ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ರಿಜಿಸ್ಟರ್ ಮಾಡಿಕೊಳ್ಳುವುದು ಹೇಗೆ?
– ಎಂಸಿಸಿ ಅಧಿಕೃತ ವೆಬ್ಸೈಟ್ mcc.nic.in ಗೆ ಭೇಟಿ ನೀಡಬೇಕು
– ಮೆಡಿಕಲ್ ಯುಜಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು
– ರೋಲ್ ನಂಬರ್ ಮತ್ತು ಪಾಸ್ ವರ್ಡ್ ನಮೂದಿಸಿ ಲಾಗಿನ್ ಆಗಬೇಕು
– ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕು
– ಫೀಸ್ ಪಾವತಿಸುವ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಳಿಸಿ
ಮೊದಲ ಸುತ್ತಿನಲ್ಲಿ ಸೀಟು ಸಿಗದ ಅಥವಾ ನಿಗದಿಪಡಿಸಿದ ಸೀಟನ್ನು ಅಪ್ ಗ್ರೇಡ್ ಮಾಡಲು ಬಯಸುವ ವಿದ್ಯಾರ್ಥಿಗಳು ಎರಡನೇ ಹಂತದ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಬಹುದು. ಇನ್ನು ಶೀಘ್ರದಲ್ಲೇ ಪರಿಷ್ಕೃತ ವೇಳಾಪಟ್ಟಿಯನ್ನು ಎಂಸಿಸಿ ಬಿಡುಗಡೆ ಮಾಡಲಿದೆ. ದೇಶಾದ್ಯಂತ ಶೇ. 15 ರಷ್ಟು ವೈದ್ಯಕೀಯ ಯುಜಿ ಕೋರ್ಸ್ಗಳಿಗೆ ಎಂಸಿಸಿ ಕೌನ್ಸೆಲಿಂಗ್ ನಡೆಸುತ್ತಿದೆ. ಉಳಿದ ಶೇ. 85 ರಷ್ಟು ಸೀಟುಗಳನ್ನು ರಾಜ್ಯ ಕೌನ್ಸೆಲಿಂಗ್ ಮೂಲಕ ಭರ್ತಿ ಮಾಡಲಾಗುತ್ತದೆ.
ಮತ್ತೊಂದೆಡೆ, ಮೊದಲನೇ ಸುತ್ತಿನಲ್ಲಿ ಸೀಟು ಹಂಚಿಕೆಯನ್ನು ಸ್ವೀಕರಿಸಿ ಕಾಲೇಜಿಗೆ ವರದಿ ಮಾಡಿಕೊಂಡಿರುವ ಅಭ್ಯರ್ಥಿಗಳು ಎರಡನೇ ಸುತ್ತಿನ ಕೌನ್ಸೆಲಿಂಗ್ ನಲ್ಲಿ ಭಾಗವಹಿಸುವಂತಿಲ್ಲ ಎಂದು ಎಂಸಿಸಿ ತಿಳಿಸಿದೆ.