ಲಕ್ನೋ: ಯಶಸ್ವಿ ಬಾಹ್ಯಾಕಾಶ ಯಾತ್ರೆಯ ಬಳಿಕ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಇದೇ ಮೊದಲ ಬಾರಿಗೆ ತಮ್ಮ ತವರೂರು ಲಕ್ನೋಗೆ ಬಂದಿಳಿದಿದ್ದು, ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.
ಇಂದು (ಸೋಮವಾರ, ಆ.25) ಬೆಳಗ್ಗೆ ಲಕ್ನೋ ವಿಮಾನ ನಿಲ್ದಾಣದಲ್ಲಿ ಶುಭಾಂಶು ಶುಕ್ಲಾ ಅವರು ಕಲಿತ ಹಳೆಯ ಶಾಲೆ ಸಿಟಿ ಮಾಂಟೆಸ್ಸರಿಯ ವಿದ್ಯಾರ್ಥಿಗಳು ಸ್ವಾಗತಿಸಿದರು. ಇದೇ ವೇಳೆ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬ್ರಜೇಶ್ ಪಾಠಕ್ ಗೌರಪೂರ್ವಕವಾಗಿ ಸ್ವಾಗತಿಸಿದರು. ನಿಲ್ದಾಣದಲ್ಲಿ ಶುಭಾಂಶು ಕುಟುಂಬಸ್ಥರು ಒಳಗೊಂಡಂತೆ ಲಕ್ನೋದ ಜನರು ಸಂಭ್ರಮದಲ್ಲಿ ವಿಜಯ ಘೋಷಣೆಗಳನ್ನು ಕೂಗಿದ್ದಾರೆ.
ಬಳಿಕ ಸಿಟಿ ಮಾಂಟೆಸ್ಸರಿ ಶಾಲೆಯ 63,000 ವಿದ್ಯಾರ್ಥಿಗಳು ವಿಮಾನ ನಿಲ್ದಾಣದಿಂದ ಜಿ20 ಚೌಕ್‌ವರೆಗೆ ವಿಜಯಯಾತ್ರೆ ನಡೆಸಿದರು. ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿ ಯುಪಿ ಡಿಸಿಎಂ ಪಾಠಕ್ ಮಾತನಾಡಿ, ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತವು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೆ ತಲುಪಿದೆ. ನಮ್ಮೂರಿನ ಹೆಮ್ಮೆಯ ಪುತ್ರನನ್ನು ಸ್ವಾಗತಿಸಲು ನಮಗೆ ನಿಜಕ್ಕೂ ತುಂಬಾ ಹೆಮ್ಮೆ ಎನಿಸುತ್ತದೆ. ಶುಭಾಂಶು ಶುಕ್ಲಾ ಇಡೀ ಜಗತ್ತಿಗೆ ಹೊಸ ಮಾರ್ಗವನ್ನು ತೋರಿಸಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರವು ಅವರ ಗೌರವಾರ್ಥವಾಗಿ ರಾಜ್ಯಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈ ಮೂಲಕ ಶುಭಾಂಶು ಅವರು ಯುವಕರಿಗೆ ಸ್ಫೂರ್ತಿಯಾಗಲಿದ್ದಾರೆ ಎಂದು ಹೇಳಿದ್ದಾರೆ.
ರೋಡ್ ಶೋ ವೇಳೆ ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಾರಿಸುತ್ತಾ ಹೆಮ್ಮೆಯಿಂದ ಘೋಷಣೆ ಕೂಗಿದರು. ಜೊತೆಗೆ ನಗರದಾದ್ಯಂತ ಶುಭಾಂಶು ಅವರ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು.



















