ನವ ದೆಹಲಿ : ರಷ್ಯಾದಿಂದ ತೈಲ ಖರೀದಿಸಲಾಗುತ್ತಿದೆ ಎನ್ನುವ ಕಾರಣ ಹೇಳಿ ಭಾರತದ ಮೇಲೆ ಶೇ. 25 ಹೆಚ್ಚುವರಿ ಸುಂಕ ವಿಧಿಸಿರುವ ಅಮೆರಿಕವನ್ನು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಮತ್ತೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಾಧ್ಯಮ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜೈ ಶಂಕರ್, ಇದು ನ್ಯಾಯಸಮ್ಮತವಲ್ಲದ ಮತ್ತು ಅವಿವೇಕದ ನಡೆ ಎಂದು ಕಿಡಿಕಾರಿದ್ದಾರಲ್ಲದೇ, “ಭಾರತದಿಂದ ತೈಲ ಅಥವಾ ಸಂಸ್ಕರಿಸಿದ ಉತ್ಪನ್ನಗಳನ್ನು ಖರೀದಿಸಲು ನಿಮಗೆ ಸಮಸ್ಯೆ ಇದ್ದರೆ, ಖರೀದಿಸಬೇಡಿ. ಆ ಬಗ್ಗೆ ಯಾರೂ ನಿಮ್ಮನ್ನು ಒತ್ತಾಯಿಸುವುದಿಲ್ಲ’ ಎಂದು ತೀಕ್ಷವಾಗಿ ಹೇಳಿದ್ದಾರೆ.
ಅಮೆರಿಕ ವಿಧಿಸಿರುವ ಶೇ. 25 ಹೆಚ್ಚುವರಿ ಸುಂಕ ಆ. 27ರಿಂದ ಜಾರಿಗೆ ಬರಲಿದೆ. ಅಲ್ಲದೆ ಈ ಮೊದಲೇ ವಿಧಿಸಲಾಗಿದ್ದ ಶೇ. 25 ಸುಂಕ ಈಗಾಗಲೇ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಜೈಶಂಕರ್ ಮಾತುಗಳು ಹೆಚ್ಚು ಮಹತ್ವ ಪಡೆದುಕೊಂಡಿವೆ. ಅಮೆರಿಕದೊಂದಿಗೆ ಇಂದೂ ವ್ಯಾಪಾರ ಒಪ್ಪಂದ ಮಾತುಕತೆಗಳು ಮುಂದುವರಿದಿವೆ. ಆದರೆ ಭಾರತವು ತನ್ನ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ಕೆಲವು ಅಂಶಗಳು ಇದರಲ್ಲಿವೆ ಎಂದು ಜೈಶಂಕರ್ ಹೇಳಿದ್ದಾರೆ.



















