ಬೆಂಗಳೂರು: ನಿಮ್ಮ ಬಳಿ 20 ವರ್ಷಕ್ಕಿಂತ ಹಳೆಯದಾದ ಬೈಕ್, ತ್ರಿಚಕ್ರ ವಾಹನ ಅಥವಾ ಕಾರು ಇದೆಯೇ? ಹಾಗಾದರೆ, ನಿಮ್ಮ ಜೇಬಿಗೆ ಹೊರೆ ಬೀಳಲಿದೆ. ಹೌದು, ಕೇಂದ್ರ ರಸ್ತೆ ಮತ್ತು ಹೆದ್ದಾರಿಗಳ ಸಚಿವಾಲಯವು, 20 ವರ್ಷಕ್ಕಿಂತಲೂ ಹಳೆಯದಾದ ವಾಹನಗಳ ನೋಂದಣಿ ನವೀಕರಣ ಶುಲ್ಕವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ಹೊಸ ಆದೇಶದ ಪ್ರಕಾರ, ಲಘು ಮೋಟಾರು ವಾಹನಗಳ(ಎಲ್ ಎಂ ವಿ) ನೋಂದಣಿ ನವೀಕರಣ ಶುಲ್ಕವನ್ನು 5 ಸಾವಿರ ರೂಪಾಯಿಯಿಂದ 10 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ.
ಪರಿಸರ ಮಾಲಿನ್ಯ, ವಿದ್ಯುತ್ ಚಾಲಿತ ವಾಹನಗಳ ಪ್ರಮಾಣವನ್ನು ಹೆಚ್ಚಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರವು ಬೆಲೆಯನ್ನು ಏರಿಕೆ ಮಾಡಿದೆ ಎಂದು ತಿಳಿದುಬಂದಿದೆ. ಹಾಗಾಗಿ, ದ್ವಿಚಕ್ರ ವಾಹನಗಳ ನೋಂದಣಿ ನವೀಕರಣ ಶುಲ್ಕವನ್ನು 1 ಸಾವಿರ ರೂಪಾಯಿಯಿಂದ 2 ಸಾವಿರ ರೂಪಾಯಿಗೆ, ತ್ರಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ನವೀಕರಣ ಶುಲ್ಕವನ್ನು 3,500 ರೂಪಾಯಿಯಿಂದ 5 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ.
ಅಷ್ಟೇ ಅಲ್ಲ, ಆಮದು ಮಾಡಿಕೊಂಡಿರುವ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ನೋಂದಣಿ ನವೀಕರಣ ಶುಲ್ಕವನ್ನು 20 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ಅದೇ ರೀತಿ, ಆಮದು ಮಾಡಿಕೊಂಡಿರುವ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಚಕ್ರಗಳ ವಾಹನಗಳ ನೋಂದಣಿ ನವೀಕರಣ ಶುಲ್ಕವನ್ನು 80 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ.
ಜನರು 20 ವರ್ಷಕ್ಕಿಂತ ಹೆಚ್ಚಿನ ವಾಹನಗಳನ್ನು ಇಟ್ಟುಕೊಳ್ಳಬಾರದು, ಹೊಸ ವಾಹನಗಳನ್ನು ಖರೀದಿಸಬೇಕು ಎಂಬುದು ಕೇಂದ್ರ ಸರ್ಕಾರದ ಧೋರಣೆಯಾಗಿದೆ. ಇದೇ ಕಾರಣಕ್ಕಾಗಿ 2021ರ ಅಕ್ಟೋಬರ್ ನಲ್ಲೂ ಹಳೆಯ ವಾಹನಗಳ ನೋಂದಣಿ ಶುಲ್ಕವನ್ನು ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಏರಿಕೆ ಮಾಡಿದೆ.