ಇತ್ತೀಚೆಗೆ ಬೀದಿ ನಾಯಿ ವಿಷಯ ದೊಡ್ಡ ರಂಪಾಟ, ವಿವಾದಕ್ಕೆ ಕಾರಣವಾಗುತ್ತಿದೆ. ದೆಹಲಿಯಿಂದ ಹಿಡಿದು ಕಟ್ಟಕಡೆಯ ಕುಗ್ರಾಮದಲ್ಲೂ ಬೀದಿ ನಾಯಿ ತನ್ನ ರಂಪಾಟ, ಹಾವಳಿ ಮುಂದುವರೆಸುತ್ತಲೇ ಇದೆ. ಹಲವೆಡೆ ರಾತ್ರಿ ಆದರೆ ಸಾಕು, ಕಳ್ಳಕಾಕರು, ಪುಡಾರಿಗಳ ಭಯಕ್ಕಿಂತಲೂ ಈ ಬೀದಿನಾಯಿಗಳ ಭಯವೇ ಹೆಚ್ಚು ಎನ್ನುವಂತಹ ಸ್ಥಿತಿ ಇದೆ. ಸಿಲಿಕಾನ್ ಸಿಟಿ ಕೂಡ ಈ ಬೀದಿ ನಾಯಿಗಳ ಹಾವಳಿಗೆ ಬೆಚ್ಚಿ ಬಿದ್ದಿದ್ದು, ಈಗ ನಾಯಿಗಳ ಅಂಕಿ-ಸಂಖ್ಯೆ ಕಂಡು ನಿಂತಲ್ಲೇ ನಡುಗುತ್ತಿದ್ದಾರೆ.
ಹೌದು! ಸಿಲಿಕಾನ್ ಸಿಟಿ ತುಂಬಾ ಬೌ..ಬೌ..ಸದ್ದಿದೆ. ಅದು ಜನರನ್ನು ಬೆಚ್ಚಿ ಬೀಳಿಸುತ್ತಿದೆ. ಈಗಾಗಲೇ ನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೂ ಬೀದಿ ನಾಯಿಗಳ ರಂಪಾಟ ಮಾತ್ರ ನಿಲ್ಲುತ್ತಿಲ್ಲ. ಸಂತಾನ ಹರಣ ಸೇರಿದಂತೆ ಸಾಕಷ್ಟು ನಿರ್ಧಾರಗಳನ್ನು ಕೋರ್ಟ್ ನಿರ್ದೇಶನದಂತೆ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಂಡಿವೆ. ಆದರೂ ಬೀದಿನಾಯಿಗಳ ಸಂಖ್ಯೆ ಏರಿಕೆಯಾಗುತ್ತಲೇ ಇವೆ. 2023ರ ವರದಿಯಂತೆ ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 2,79,335 ನಾಯಿಗಳಿವೆ. ನಾಯಿಗಳಿಂದ ಸಾಕಷ್ಟು ಜನರು ಈಗಾಗಲೇ ಗಾಯಗೊಂಡಿದ್ದಾರೆ. ಗಾಯಗೊಳ್ಳುತ್ತಲೇ ಇದ್ದಾರೆ. ಬೀದಿ ನಾಯಿಗಳ ನಿಯಂತ್ರಣ ಮಾಡಬೇಕು ಎಂಬ ಕೂಗಿನ ಮಧ್ಯೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿರಿಯಾನಿ ಆಹಾರ ಒದಗಿಸುವ ಯೋಜನೆ ದೊಡ್ಡ ಸದ್ದು ಮಾಡಿತ್ತು. ಇದು ಸಾರ್ವಜನಿಕರ ಹಿಡಿಶಾಪಕ್ಕೆ ಕಾರಣವಾಗಿತ್ತು.
ಬೀದಿ ನಾಯಿಗಳ ಹಾವಳಿಗೆ ಕ್ರಮ ಇಲ್ಲವೇ?
ಬೀದಿ ನಾಯಿಗಳ ಬಗ್ಗೆ ಸರ್ಕಾರ ಹೇಳೋದೇನು?
ಹೌದು..ನಾಯಿಗಳ ಹಾವಳಿ ವಿಪರೀತವಾಗುತ್ತಿದ್ದಂತೆ ಈ ಸದ್ದು ವಿಧಾನಸೌಧಕ್ಕೂ ಕೇಳಿಸಿದೆ. ವಿಧಾನಸೌಧದಲ್ಲೂ ಬೀದಿನಾಯಿಗಳ ಹಾವಳಿಯ ಚರ್ಚೆ ನಡೆದಿದೆ. ಈ ಕುರಿತು ಕೆಲವು ಮಾಹಿತಿಗಳನ್ನು ಸರ್ಕಾರ ನೀಡಿದೆ. ನಾಯಿಗಳ ನಿಯಂತ್ರಣಕ್ಕೆ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಹಾಗೂ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಎಬಿಸಿ ಡಾಗ್ಸ್ ರೂಲ್ಸ್ 2023ರ ಮಾರ್ಗಸೂಚಿಯಂತೆ ಬೀದಿನಾಯಿಗಳ ನಿಯಂತ್ರಣಕ್ಕೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಕಾರ್ಯಕ್ರಮವನ್ನು ಕೈಗೊಳ್ಳಲಾಗುತ್ತಿರುತ್ತಿದೆ. ರೇಬಿಸ್ ರೋಗವನ್ನು ನಿಯಂತ್ರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ವಾರ್ಡ್ ಗಳಲ್ಲಿ ಬೀದಿ ನಾಯಿಗಳಿಗೆ ಸಾಮೂಹಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ಹುಚ್ಚು ನಾಯಿ ರೋಗ ವಿರುದ್ಧ ಲಸಿಕೆ ಹಾಗೂ ಸಂಯುಕ್ತ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಸ್ತುತ ಕಾರ್ಯಕ್ರಮ ಪ್ರಗತಿಯಲ್ಲಿದೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಎಲ್ಲ ವಲಯಗಳಲ್ಲೂ ಹಮ್ಮಿಕೊಳ್ಳಲಾಗುತ್ತಿದೆ. ಪ್ರಸ್ತುತ ನಾಯಿ ಕಡಿತಕ್ಕೆ ನಾಯಿ ಕಡಿತದ ಪ್ರಕರಣಗಳ ಪ್ರದೇಶಗಳಲ್ಲಿ ರೇಬಿಸ್ ರೋಗದ ವಿರುದ್ಧ ರಿಂಗ್ ಯಾಕ್ಸಿನೇಷನ್ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಾರ ಹೇಳಿದೆ. ಆದರೆ, ನಾಯಿಗಳ ಸಂಖ್ಯೆ ಮಾತ್ರ ಜನರನ್ನು ಬೆಚ್ಚಿ ಬೀಳಿಸುತ್ತಿದೆ.
ಬೆಂಗಳೂರಿನಲ್ಲಿರುವ ನಾಯಿಗಳ ಸಂಖ್ಯೆ ಎಷ್ಟು ಗೊತ್ತಾ?
ಯಾವ ಪ್ರದೇಶದ ಜನರು ಎಚ್ಚರಿಕೆಯಿಂದ ಇರಬೇಕು?
ಸಿಲಿಕಾನ್ ಸಿಟಿ ಅಂದ್ರೆ ಅದು ಅನ್ನದ ನೆಲ..ಇಲ್ಲಿ ಇರುವ ಬಹುತೇಕ ಜನ ಆಹಾರ ಅರಸಿ, ಹೊಟ್ಟೆ ಪಾಡಿಗೆ ಬಂದವರೇ… ಹೀಗಾಗಿ ಕೆಲಸಕ್ಕೆ ಸಮಯವಿಲ್ಲ. ಓಡಾಟಕ್ಕೆ ದಣಿವಿಲ್ಲ. ಹೀಗಾಗಿ ಅಲ್ಲದ ಸಮಯದಲ್ಲೂ ಜನ ಓಡಾಡುತ್ತಿರುತ್ತಾರೆ. ಇಂಥವರಿಗೆ ಬೀದಿನಾಯಿಗಳು ಶತ್ರುಗಳಾಗಿ ಬಿಟ್ಟಿವೆ. ಸರ್ಕಾರದ ಮಾಹಿತಿಯಂತೆ ಬೆಂಗಳೂರಿನಲ್ಲಿ ಬರೋಬ್ಬರಿ 2,79,335 ಬೀದಿ ನಾಯಿಗಳಿವೆ. ಈ ಪೈಕಿ ಬೆಂಗಳೂರು ದಕ್ಷಿಣದಲ್ಲಿ 26,073, ದಾಸರಹಳ್ಳಿಯಲ್ಲಿ 21,122, ಬೆಂಗಳೂರು ಪೂರ್ವ ವ್ಯಾಪ್ತಿಯಲ್ಲಿ 38,359, ಯಲಹಂಕ ವ್ಯಾಪ್ತಿಯಲ್ಲಿ 33,630, ಬೆಂಗಳೂರು ಪಶ್ಚಿಮದಲ್ಲಿ 22,998, ಮಹದೇವಪುರದಲ್ಲಿ 61,367, ಆರ್ ಆರ್ ನಗರದಲ್ಲಿ 38,053, ಬೊಮ್ಮನಹಳ್ಳಿಯಲ್ಲಿ 3,773 ನಾಯಿಗಳು ಇವೆ. ಇನ್ನಾದರೂ ಬೀದಿ ನಾಯಿಗಳ ಬಾಯಿಗೆ ಸರ್ಕಾರ ಬ್ರೇಕ್ ಹಾಕಲಿದೆಯೇ ಕಾಯ್ದು ನೋಡಬೇಕಿದೆ.



















