ಬೆಂಗಳೂರು : ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಒದಗಿಸುವ ಕುರಿತಾಗಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಮಾಡಿದ್ದೇವೆ. ಎಸ್ ಸಿ ಬಲಗೈ ಮತ್ತು ಎಡಗೈ ಸಮುದಾಯಗಳಿಗೆ ಸಮಾನವಾಗಿ ಶೇ.6ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಸ್ಪೃಶ್ಯ ಜಾತಿಗಳಿಗೆ ಶೇ.5ರಷ್ಟು ಮೀಸಲಾತಿಗೆ ತೀರ್ಮಾನಿಸಲಾಗಿದೆ. ಆದರೆ, ಇದಕ್ಕೆ ಕೆಲವು ದಲಿತ ಮುಖಂಡರು ಅಸಮಾಧಾನ ಹೊರ ಹಾಕಿದ್ದಾರೆ. ಅಲೆಮಾರಿಗಳು ಸೇರಿದಂತೆ ಇತರೆ ಜಾತಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಆಕ್ರೋಶ ಕೇಳಿ ಬಂದಿದೆ.
ಈ ನಡುವೆಯೂ ಸಿಎಂ ಸಿದ್ದರಾಮಯ್ಯ ಇಂದು (ಬುಧವಾರ, ಆಗಸ್ಟ್ 20) ಸದನದಲ್ಲಿ ಮೀಸಲಾತಿ ಕುರಿತು ಸಚಿವ ಸಂಪುಟ ತೆಗೆದುಕೊಂಡು ತೀರ್ಮಾನವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಮುಖ್ಯವಾಗಿ ಈ ವೇಳೆ ಏನಾದರೂ ಬದಲಾವಣೆ ಮಾಡಬೇಕಾದರೆ ಮುಂದಿನ ಹಂತದಲ್ಲಿ ತೀರ್ಮಾನ ಮಾಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಮುಂಗಾರು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಎಡಗೈ ಸಮುದಾಯಕ್ಕೆ 6%, ಬಲ ಸಮುದಾಯಕ್ಕೆ 6% ಹಾಗೂ ಸ್ಪೃಶ್ಯ ಸಮುದಾಯಕ್ಕೆ ಶೇ.5ರಷ್ಟು ಮೀಸಲಾತಿ ಕಲ್ಪಿಸಲು ತೀರ್ಮಾನ ಮಾಡಲಾಗಿದೆ. ನ್ಯಾ.ನಾಗಮೋಹನ್ ದಾಸ್ ವರದಿಯ ಶಿಫಾರಸುಗಳನ್ನು ಕೆಲ ಮಾರ್ಪಾಡುಗಳೊಂದಿಗೆ ಒಳ ಮೀಸಲಾತಿ ಕಲ್ಪಿಸಲಾಗಿದೆ. A, B, C ಎಂದು ವರ್ಗೀಕರಣ ಮಾಡಿ ಮೀಸಲಾತಿ ಹಂಚಲಾಗಿದ್ದು, ಒಳ ಮೀಸಲಾತಿ ಹೋರಾಟದ ಮೊಕದ್ದಮೆ ಹಿಂಪಡೆಯಲೂ ತೀರ್ಮಾನಿಸಲಾಗಿದೆ. ಈ ಮೂಲಕ ದಶಗಳ ಹೋರಾಟಕ್ಕೆ ನಮ್ಮ ಸರ್ಕಾರ ನ್ಯಾಯ ಒದಗಿಸಿದೆ ಎಂದಿದ್ದಾರೆ.
ಒಳ ಮೀಸಲಾತಿಯಲ್ಲಿ ಏನಾದರೂ ಬದಲಾವಣೆ ಮಾಡಬೇಕಂದರೇ, ಮುಂದಿನ ಹಂತದಲ್ಲಿ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಹೇಳುತ್ತಿದ್ದಂತೆಯೇ ಆಡಳಿತ ಪಕ್ಷದ ಸಚಿವರು, ಶಾಸಕರು ಮೇಜು ತಟ್ಟಿ ಸ್ವಾಗತಿಸಿದರು. ಬಳಿಕ ವಿಪಕ್ಷ ಬಿಜೆಪಿ ಸದಸ್ಯರು ಮಾತನಾಡಲು ಮುಂದಾದರು. ಆದರೆ, ಇದಕ್ಕೆ ಸ್ಪೀಕರ್ ಯುಟಿ ಖಾದರ್, ಈಗ ಮಾತನಾಡುವುದು ಬೇಡ ಎಂದು ಅವರಕಾಶ ನೀಡಲಿಲ್ಲ. ಬಳಿಕ ಮಾತು ಮುಂದುವರಿಸಿದ ಸಿಎಂ, ನಿಮ್ಮ ಕೈಯಲ್ಲಿ ಮಾಡಲು ಆಗಿಲ್ಲ ಎಂದೇ ನಾವು ಮಾಡಿದ್ದೇವೆ. ನಿಮ್ಮ ಕಂಡರೆ ಭಯ ಇಲ್ಲ ಎಂದು ಬಿಜೆಪಿಯವರಿಗೆ ತಿರುಗೇಟು ನೀಡಿದ್ದಾರೆ.
ಎಡಗೈ ಜೊತೆ ಬಲಗೈ ಸಮುದಾಯಕ್ಕೆ ಶೇ.6ರಷ್ಟು ಮೀಸಲಾತಿ ಕಲ್ಪಿಸಿ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಆದರೆ, ಲಂಬಾಣಿ, ಬೋವಿ, ಅಲೆಮಾರಿ ಸೇರಿ 60 ಪರಿಶಿಷ್ಟ ಜಾತಿಗಳಿಗೆ ಶೇ.5ರಷ್ಟು ಮೀಸಲಾತಿ ನೀಡಿರುವುದು ಹೊಸ ಸಂಘರ್ಷಕ್ಕೆ ನಾಂದಿಹಾಡಿದೆ. ಇನ್ನು, ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಕೆಲವು ತಪ್ಪುಗಳಾಗಿವೆ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು, ಪರಿಶಿಷ್ಟ ಜಾತಿಗಳ ಶಾಶ್ವತ ಆಯೋಗ ಸ್ಥಾಪನೆಗೆ ತೀರ್ಮಾನ ಮಾಡಿದ್ದೇವೆ. ನೇಮಕಾತಿಗೆ ವಯೋಮಿತಿ ಸಡಿಲಿಕೆ ಮಾಡಲು ತೀರ್ಮಾನಿಸಲಾಗಿದೆ. ಇನ್ನು ಒಳಮೀಸಲಾತಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನೂ ಹಿಂಪಡೆಯಲು ತೀರ್ಮಾನ ಮಾಡಿದ್ದೇವೆ. ಇದರೊಂದಿಗೆ ಒಳ ಮೀಸಲಾತಿ ಕುರಿತ ದಶಕದ ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.



















