ಬೆಂಗಳೂರು : ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳನ್ನು ಸತ್ಯವನ್ನಾಗಿ ಮಾಡಲು ಹೊರಟಿರುವ ವ್ಯಕ್ತಿಗಳ ಹಿಂದೆ ಮಾಸ್ಟರ್ ಮೈಂಡ್ ಸಸಿಕಾಂತ್ ಸೆಂಥಿಲ್ ಇದ್ದಾನೆ ಎಂದು ಹೇಳಿದ್ದೆ. ಆಧಾರ ರಹಿತ ಆರೋಪ ಮಾಡಿದ್ದಾರೆಂದು ಸೆಂಥಿಲ್ ಹೇಳಿದ್ದಾರೆ. ನನ್ನ ಮೇಲೆ ಸಿಬಿಐ ಪ್ರಕರಣ ಆದಾಗ ಸಸಿಕಾಂತ್ ಸೆಂಥಿಲ್ ಎಂಬವನು ಬಳ್ಳಾರಿಯಲ್ಲಿ ಎಸಿ ಆಗಿ ಕೆಲಸ ಮಾಡಿರಲೇ ಇಲ್ಲ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಈ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಮಾತನಾಡಿದ ರೆಡ್ಡಿ, ನಾನು ಬಂಧನವಾದ ಬಳಿಕ ಸೆಂಥಿಲ್ ಕರ್ತವ್ಯಕ್ಕೆ ಸೇರಿಕೊಂಡಿದ್ದು, ನನ್ನ ಬಂಧನ ಪ್ರಕರಣಕ್ಕೂ ಅವನಿಗೂ ಸಂಬಂಧವಿಲ್ಲ. ಸೆಂಥಿಲ್ ಮತ್ತೊಮ್ಮೆ ಸುಳ್ಳು ಹೇಳಿದ್ದಾನೆ. ಸೆಂಥಿಲ್ ಎಂಬ ವ್ಯಕ್ತಿ ಹಿಂದೂ ವಿರೋಧಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆಗಿದ್ದಾಗಲೇ ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡುವುದಕ್ಕೆ ಯೋಜನೆ ರೂಪಿಸಿಕೊಂಡಿದ್ದಾನೆ. ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ಕೊಡುವ ವೇಳೆ ಆರ್ಟಿಕಲ್ 370, ಎನ್ಆರ್ ಸಿ, ಸಿಎಎ ಸೇರಿದಂತೆ ಎಲ್ಲಾ ವಿರೋಧ ವ್ಯಕ್ತ ಮಾಡಿದ್ದ, ಎಸ್‌ಡಿಪಿಐ ಸಂಘಟನೆಗಳ ಸಮಾವೇಶಗಳಲ್ಲಿ ಪಾಲ್ಗೊಂಡು ಹಿಂದೂ ವಿರೋಧಿ ಹೇಳಿಕೆ ಕೊಟ್ಟಿರುವ ವೀಡಿಯೋಗಳು ಇವೆ. ಕಾಂಗ್ರೆಸ್ ಹೈಕಮಾಂಡ್‌ಗೆ ಹತ್ತಿರವಾಗಿದ್ದುಕೊಂಡು ಧರ್ಮಸ್ಥಳಕ್ಕೆ ಕಳಂಕ ತಂದ ವ್ಯಕ್ತಿ ಸೆಂಥಿಲ್, ಇನ್ನೂ ಧೈರ್ಯ ಇದ್ದರೆ ಯಾವುದೇ ತನಿಖೆಗೆ ಮುಂದೆ ಬಂದು ನಿಲ್ಲುತ್ತೇನೆ ಎಂಬ ಮಾತು ಹೇಳಬೇಕಿತ್ತು. ನನಗೆ ಸಂಬಂಧಿಸಿದ ದಾಖಲೆಗಳನ್ನು ಕೊಟ್ಟಿದ್ದ ಕಾರಣಕ್ಕೆ ನಾನು ಮಾತಾಡುತ್ತಿದ್ದೇನೆ ಎಂದು ಹೇಳಿರುವುದು ಸುಳ್ಳು, ನನ್ನ ಕೇಸ್, ಬಂಧನ ಆದ ಬಳಿಕ ಆ ವ್ಯಕ್ತಿ ಬಳ್ಳಾರಿಗೆ ಬಂದಿರುವುದು ಎಂದು ಹೇಳಿದ್ದಾರೆ.
ಸೆಂಥಿಲ್‌ನನ್ನು ದೊಡ್ಡ ಮಟ್ಟದ ವಿಚಾರಣೆಗೆ ಒಳಪಡಿಸಬೇಕು. ಆಗಷ್ಟೇ ಸೆಂಥಿಲ್ ಮಾಸ್ಟರ್ ಮೈಂಡ್ ಎಂಬ ವಿಚಾರ ಹೊರಗೆ ಬರುತ್ತದೆ. ಸೆಂಥಿಲ್ ವಿಚಾರಣೆಗೆ ಸಿದ್ದರಾಗಬೇಕು ಎಂದು ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.


















