ಬೆಂಗಳೂರು : ಬೆಂಗಳೂರಿನ ಬೀದಿನಾಯಿಗಳಿಗೆ ಬಾಡೂಟ ಕೊಡಲು ಚಿಂತನೆ ನಡೆಸಿ ಪೇಚಿಗೆ ಸಿಲುಕಿದ್ದ ಬಿಬಿಎಂಪಿ ಇದೀಗ ಮತ್ತೊಂದು ಹೊಸ ಪ್ರಯೋಗಕ್ಕೆ ಹೊರಟಿದೆ.
ಬೀದಿನಾಯಿಗಳ ನಿಯಂತ್ರಣಕ್ಕೆ ಅವುಗಳಿಗೆ ತರಬೇತಿ ನೀಡಲು ಚಿಂತನೆ ನಡೆಸಿದೆ. ಮನುಷ್ಯರ ಮೇಲೆ ದಾಳಿ ಮಾಡುವ ಬೀದಿ ನಾಯಿಗಳ ನಿಯಂತ್ರಣಕ್ಕೆ ತರಬೇತುದಾರರನ್ನು ನೇಮಿಸಿಕೊಳ್ಳಲು ಮುಂದಾಗಿದ್ದು, ಪೊಲೀಸ್ ಡಾಗ್ ತರಬೇತುದಾರರ ಮೂಲಕ ನಾಯಿಗಳ ಮೇಲೆ ನಿಗಾ ಇಡಲು ಉದ್ದೇಶಿಸಿದೆ.
“ಬೀದಿ ನಾಯಿಗಳಿಗೆ ತರಬೇತಿಗೆ ಖರ್ಚೆಷ್ಟು ?”
ಬೀದಿ ನಾಯಿಗಳ ತರಬೇತಿದಾರನೋರ್ವನಿಗೆ ದಿನಕ್ಕೆ 233 ರೂಪಾಯಿ ನಿಗದಿ ಮಾಡಲು ಪಾಲಿಕೆ ಯೋಜಿಸಿದೆ. ಮತ್ತೊಂದೆಡೆ, ಪ್ರಾಯೋಗಿಕವಾಗಿ ಪರಿಣಾಮಕಾರಿಯಾದ ಯೋಜನೆಗಳನ್ನು ಹಮ್ಮಿಕೊಳ್ಳುವುದು ಬಿಟ್ಟು ಇಲ್ಲಸಲ್ಲದ ಯೋಜನೆಗಳ ಪ್ರಯೋಗಕ್ಕೆ ಹೊರಟ ಪಾಲಿಕೆ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೀದಿ ನಾಯಿಗಳನ್ನು ನಿಯಂತ್ರಣ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬದಲು, ಪಾಲಿಕೆ ದಿನಕ್ಕೊಂದು ನಿರುಪಯುಕ್ತ ಪ್ರಯೋಗ ಚಿಂತನೆ ಮಾಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬೀದಿನಾಯಿಗಳ ಕಾಟ ಹೆಚ್ಚಾಗುತ್ತಿದ್ದು, ಪಾಲಿಕೆ ಅದೆಷ್ಟರ ಮಟ್ಟಿಗೆ ಬೀದಿನಾಯಿಗಳಿಗೆ ಪಾಠ ಕಲಿಸಿ ನಿಯಂತ್ರಣ ಮಾಡುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.



















