ಸಾಹಸಸಿಂಹ,ಅಭಿನವ ಭಾರ್ಗವ, ಕೋಟಿಗೊಬ್ಬ ಡಾ.ವಿಷ್ಣುವರ್ಧನ್ ವಿಧಿವಶರಾಗಿ 15 ವರ್ಷಗಳು ಕಳೆದರೂ ಸಮಾಧಿಯ ಹೋರಾಟ ಮಾತ್ರ ತಾರ್ಕಿಕ ಅಂತ್ಯ ಕಾಣುತ್ತಿಲ್ಲ. ಒಂದೆಡೆ ರಾಜ್ಯಸರ್ಕಾರ ನೀಡಿರುವ ಜಾಗವನ್ನು ತೆಗೆದುಕೊಂಡು ಅನಿರುದ್ದ್ ಮೈಸೂರಿನಲ್ಲಿ ಸ್ಮಾರಕ ನೋಡಿಕೊಳ್ಳುತ್ತಿದ್ದಾರೆ.

ಇನ್ನೊಂದೆಡೆ ನಿರ್ಮಾಪಕ ಕೆ.ಮಂಜು ಅಭಿಮಾನಿ ಸ್ಟುಡಿಯೋದಲ್ಲೇ ವಿಷ್ಣು ಸ್ಮಾರಕವಾಗಬೇಕು ಅಂತ ಪಟ್ಟು ಹಿಡಿದಿದ್ದಾರೆ. ಇನ್ನೂ ಮೂರನೇ ಹಾದಿಯಾಗಿ ನಟ ಕಿಚ್ಚ ಸುದೀಪ್ ಕೆಂಗೇರಿ ಬಳಿಯಲ್ಲಿ ವಿಷ್ಣುವರ್ಧನ್ ದರ್ಶನ ಕೇಂದ್ರ ನಿರ್ಮಿಸಲು ಮುಂದಾಗಿದ್ದಾರೆ. ಎಲ್ಲವೂ ಸೇರಿ ದಾದಾ ಅಭಿಮಾನದ ದಾರಿಯನ್ನೇ ಗೋಜಲಾಗಿಸಿಬಿಟ್ಟಿದೆ.

ಮೊನ್ನೆಯಷ್ಟೇ ವಿಷ್ಣುವರ್ಧನ್ ಅಳಿಯ ಹಾಗೂ ನಟ ಅನಿರುದ್ದ್ ಜಯನಗರದ ತಮ್ಮ ನಿವಾಸದಲ್ಲಿ ಅಭಿಮಾನಿಗಳನ್ನ ಮತ್ತು ಮಾಧ್ಯಮಗಳನ್ನ ಬಹಿರಂಗ ಸಭೆ ಕರೆದಿದ್ದರು. ಅಭಿಮಾನ್ ಸ್ಟುಡಿಯೋದ ಜಾಗಕ್ಕಾಗಿ ಇನ್ನು ಮುಂದೆ ಜಗಳವಾಡಿ ಪ್ರಯೋಜನವಿಲ್ಲ. ಇಷ್ಟು ವರ್ಷ ಮಾಡೋ ಪ್ರಯತ್ನಗಳನ್ನೆಲ್ಲ ಮಾಡಿ ಆಗಿಹೋಗಿದೆ. ಮೈಸೂರಿನಲ್ಲಿ ನಿರ್ಮಾಣವಾಗಿರೋ ಸ್ಮಾರಕವೇ ವಿಷ್ಣು ಸೇನೆಯ ಪಾಲಿಗೆ ದೇಗುಲವಾಗಲಿ ಎಂದು ಹೇಳಿದ್ದರು.

ಈಗ ನಿರ್ಮಾಪಕ ಕೆ.ಮಂಜು ಹೊಸ ದಾರಿ ಹಿಡಿದಿದ್ದಾರೆ. ಕೆಲವು ದಾಖಲೆಗಳನ್ನು ಇಟ್ಟುಕೊಂಡು ಅಭಿಮಾನ್ ಸ್ಟುಡಿಯೋದಲ್ಲೇ ವಿಷ್ಣು ಸ್ಮಾರಕವಾಗಬೇಕು ಎನ್ನುತ್ತಿದ್ದಾರೆ. ಡಾ.ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ಬೆಂಬಲವೂ ಕೆ.ಮಂಜು ಪಾಲಿಗಿದೆ.

ಸುದ್ದಿಗೋಷ್ಠಿಯಲ್ಲಿ ಗಳಗಳನೆ ಕಣ್ಣೀರಿಟ್ಟ ಕೆ.ಮಂಜು ನಾನೊಬ್ಬ ನಿರ್ಮಾಪಕ ಮಾತ್ರ ಅಲ್ಲ ಅಪ್ಪಟ ವಿಷ್ಣು ಅಭಿಮಾನಿ ಇದನ್ನೆಲ್ಲಾ ಮಾಡುತ್ತಿರುವುದು ಅವರಿಗೋಸ್ಕರ. ಬಾಲಣ್ಣ ಮೊಮ್ಮಗ ಕಾರ್ತಿಕ್ ರನ್ನ ಭೇಟಿಯಾಗಿ ಮಾತನಾಡಿದ್ದೇನೆ. ಆ 10 ಗುಂಟೆ ಜಾಗ ನಮಗೆ ಬೇಕೇ ಬೇಕು. ಅಂತ್ಯಕ್ರಿಯೆ ಆದ ಜಾಗವೇ ಪವಿತ್ರವಾದದ್ದು. ಸುದೀಪ್ ಮಾಡ್ತಿರೋ ಕೆಲಸಕ್ಕೂ ನನ್ನ ಸಪೋರ್ಟ್ ಇದೆ ಅಂತ ವಿಷ್ಣುಸಮಾಧಿ ಚರ್ಚೆಗೊಂದು ಹೊಸ ಟರ್ನ್ ಕೊಟ್ಟಿದ್ದಾರೆ.

16 ವರ್ಷಗಳಿಂದ ನಡೆದುಕೊಂಡು ಬಂದ ಈ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣಿಸ್ತಿಲ್ಲ. ಕಿಚ್ಚ ಸುದೀಪ್ ಈಗ ತಾವೇ ಮುಂದೆ ನಿಂತು ಇದಕ್ಕೆ ಅಂತ್ಯ ಹಾಡಲು ಹೊರಟಾಗಲೇ, ಕೆ.ಮಂಜು ಮತ್ತೆ ತಮ್ಮ ಪಥ ಬದಲಿಸಿದ್ದಾರೆ. ಅನಿರುದ್ದ್, ಕೆ.ಮಂಜು ಹಾಗೂ ಸುದೀಪ್ ಒಟ್ಟಿಗೆ ಕೂತು ಒಂದ್ ನಿರ್ಧಾರ ತೆಗೆದುಕೊಂಡಿದ್ದರೆ ಬಹುಷ್ಯ ಈ ಗೊಂದಲಕ್ಕೆ ತೆರೆ ಬೀಳುತ್ತಿತ್ತು ಅನಿಸುತ್ತದೆ.



















