ಕೊಪ್ಪಳ: ಬಿಎಸ್ ಪಿಎಲ್ ಕಾರ್ಖಾನೆ ಸ್ಥಾಪನೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ, ಬಲ್ಡೋಟಾ ಕಾರ್ಖಾನೆ ಆರಂಭದ ಸಿದ್ದತೆ ನಿಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದರು.
ಆದರೆ, ಕಾರ್ಖಾನೆಯ ಕಾರಣದಿಂದ ಕೆರೆಯಲ್ಲಿ ಜಾನುವಾರುಗಳಿಗೆ ಕುಡಿವ ನೀರು ನೀಡುತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಆರೋಪ ಮಾಡಿದ್ದಾರೆ. ಈ ಕುರಿತು ವಿಧಾನ ಪರಿಷತ್ ನಲ್ಲಿ ಗಂಭೀರ ಚರ್ಚೆ ನಡೆಯಿತು.
ಹೇಮಲತಾ ನಾಯಕ, ಕಾರ್ಖಾನೆಯ ಕುರಿತು ಪ್ರಶ್ನೆ ಮಾಡಿ, ಬಿಎಸ್ ಪಿಎಲ್ ಕಾರ್ಖಾನೆ ತಡೆಗೆ ಸಿಎಂ ಮೌಖಿಕ ಆದೇಶ ನೀಡಿದ್ದಾರೆ. ಆದರೆ ಅಲ್ಲಿ ಇನ್ನೂ ಕಾಮಗಾರಿ ನಡೆಯುತ್ತಿದೆ. 44 ಎಕರೆ ಬಸಾಪುರ ಕೆರೆಯಲ್ಲಿ ದನ ಹಾಗೂ ಕುರಿಗಾಯಿಗಳಿಗೆ ಕುಡಿವ ನೀರು ನೀಡುತ್ತಿಲ್ಲ. ಕಾರ್ಖಾನೆ ದ್ವಾರಕ್ಕೆ ದೊಡ್ಡ ಗೇಟ್ ಅಳವಡಿಸಲಾಗಿದೆ ಎಂದು ಹೇಳಿದ್ದಾರೆ.
ಇದಕ್ಕೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಉತ್ತರಿಸಿ, ಕೇಂದ್ರ ಪರಿಸರ ಇಲಾಖೆಯಿಂದ ಕಾರ್ಖಾನೆ ಆರಂಭಕ್ಕೆ ಪರವಾನಿಗೆ ದೊರಕಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಯಿಂದಲೂ ವರದಿ ಬಂದಿದೆ. ಈ ಹಂತದಲ್ಲಿ ನಾವು ಕ್ರಮ ಕೈಗೊಳ್ಳಲು ಅಸಾಧ್ಯ. ಆದರೂ ಐಐಎಸ್ಸಿಯಿಂದ ಪರಿಶೀಲಿಸಿ ವರದಿ ನೀಡಲು ಸೂಚನೆ ನೀಡುತ್ತೇವೆ.
ವರದಿ ಬಂದ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಂ ಬಿ ಪಾಟೀಲ ಹೇಳಿದರು.