ಬೆಂಗಳೂರು : ನಮ್ಮ ಪಕ್ಷದ ಎಲ್ಲಾ ನಾಯಕರೂ ಧರ್ಮಸ್ಥಳಕ್ಕೆ ಭೇಟಿ ನೀಡಿ, ಮಂಜುನಾಥನ ದರ್ಶನ ಪಡೆದು, ವೀರೇಂದ್ರ ಹೆಗಡೆಯವರನ್ನೂ ಭೇಟಿಯಾಗಿದ್ದೇವು. ಧರ್ಮಸ್ಥಳದ ಕುರಿತು ನಡೆಯುತ್ತಿರುವ ಅಪಪ್ರಚಾರಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಯಾಕೆ ಮುಂದಾಗಲಿಲ್ಲ? ಎನ್ನುವುದರ ಬಗ್ಗೆ ಗೃಹ ಸಚಿವರು ಉತ್ತರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧಿವೇಶನದಲ್ಲಿ ಪ್ರಶ್ನಿಸಿದ್ದಾರೆ.
ಧರ್ಮಸ್ಥಳದ ವಿಚಾರದಲ್ಲಿ ದೊಡ್ಡ ಷಡ್ಯಂತ್ರ ಇದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಭಕ್ತರು ಆತಂಕದಲ್ಲಿ ಇದ್ದಾರೆ. ಶಿವಕುಮಾರ್ ಏನಾದರು ಹೇಳಿಕೊಳ್ಳಲಿ, ಷಡ್ಯಂತ್ರ, ಪಿತೂರಿ ಮಾಡಿದ ವ್ಯಕ್ತಿಗಳ ಬಗ್ಗೆ ಯಾಕೆ ತನಿಖೆ ಮಾಡುತ್ತಿಲ್ಲವೆಂದು ಗೃಹ ಸಚಿವರು ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಧರ್ಮಸ್ಥಳದ ವಿಚಾರದಲ್ಲಿ ಗೊಂದಲಕ್ಕೆ ಸರ್ಕಾರ ತೆರೆ ಎಳೆಯುತ್ತದೆ ಎಂದು ಬಿಜೆಪಿ, ಜೆಡಿಎಸ್ ನಾಯಕರ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಇನ್ನು, ಸ್ವಾತಂತ್ರ ಹೋರಾಟಗಾರರ 4.85ಕೋಟಿ ಮಾಸಾಸನ ನೀಡಲೂ ಆಗುತ್ತಿಲ್ಲ. ಮುಖ್ಯಮಂತ್ರಿ ಪರಿಹಾರ ನಿಧಿಗೂ ಹಣ ಬಿಡುಗಡೆ ಮಾಡಲಾಗದ ಸ್ಥಿತಿಗೆ ರಾಜ್ಯ ಸರ್ಕಾರ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಉತ್ತರ ನೀಡಬೇಕು ಎಂದಿದ್ದಾರೆ.
ಮಾತ್ರವಲ್ಲದೇ, ಚುನಾವಣೆ ಆಯೋಗದ ವಿರುದ್ಧ ಹಿಟ್ ಅಂಡ್ ರನ್ ಮಾಡುವ ಮೂಲಕ ರಾಹುಲ್ ಗಾಂಧಿ ಬಿಹಾರದಲ್ಲಿ ಷಡ್ಯಂತ್ರ ಮಾಡಿ ಚುನಾವಣೆ ಗೆಲ್ಲಲು ಕುತಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅಷ್ಟಲ್ಲದೇ, ಬಿ. ಕೆ. ಹರಿಪ್ರಸಾದ್ ಆರ್ ಎಸ್ ಎಸ್ ಸಂಘಟನೆಯನ್ನು ತಾಲಿಬಾನ್ ಗೆ ಹೋಲಿಕೆ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ದೇಶಭಕ್ತಿ ಸಂಘಟನೆಯಲ್ಲಿ ಲಕ್ಷ ಲಕ್ಷ ದೇಶಭಕ್ತರು ಕೆಲಸ ಮಾಡುತ್ತಿದ್ದಾರೆ. ಅಂತಹ ಸಂಘಟನೆಯನ್ನು ತಾಲಿಬಾನ್ ಗೆ ಹೋಲಿಕೆ ಮಾಡಿರುವುದನ್ನು ಮೂರ್ಖತನ ಎಂದು ಹೇಳಬೇಕೋ? ಅಥವಾ ಅವಿವೇಕಿನತ ಎಂದು ಹೇಳಬೇಕೋ ತಿಳಿಯುತ್ತಿಲ್ಲ ಎಂದು ಟೀಕಿಸಿದ್ದಾರೆ.



















