ಬೆಂಗಳೂರು : ಸೌಜನ್ಯ ಕೊಲೆ 2012ರಲ್ಲಿ ಆಗಿತ್ತು. ಸಿಬಿಐ ತನಿಖೆಯಾದರೂ ಆರೋಪಿ ಪತ್ತೆಯಾಗಿಲ್ಲ. ಮುಸುಕುದಾರಿ ವ್ಯಕ್ತಿಯೊಬ್ಬ ಬಂದು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ಕೊಡುತ್ತಾನೆ. ತನಿಖೆಗೆ ಸೂಚಿಸಲಾಗಿದೆ. ಧರ್ಮಸ್ಥಳದ ಬಗ್ಗೆ ಪ್ರಚಾರ, ಅಪಪ್ರಚಾರ ಎಲ್ಲವೂ ನಡೆದಿದೆ ಎಂದು ಸಚಿವ ರಾಮಲಿಂಗರೆಡ್ಡಿ ಹೇಳಿದ್ಧಾರೆ.
ವಿಧಾನಸೌಧದಲ್ಲಿ ವರದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ಸಾಕ್ಷಿ ದೂರುದಾರ ಸೂಚಿಸಿದಂತೆ ಹಲವು ಕಡೆ ಉತ್ಖನನ ನಡೆಸಿದರೂ ಯಾವ ಕುರುವು ಪತ್ತೆಯಾಗಿಲ್ಲ. ವಿಜಯೇಂದ್ರ ಕೂಡ ಧರ್ಮಸ್ಥಳಕ್ಕೆ ಹೋಗಿದ್ದಾರೆ. ಮಂಜುನಾಥ, ಅಣ್ಣಪ್ಪನ ವಿರುದ್ಧ ಯಾರೂ ಇಲ್ಲ. ಪ್ರಕರಣಕ್ಕೆ ತಾರ್ಕಿಕ ಅಂತ್ಯ ಬರಲಿ ಎಂಬ ಉದ್ದೇಶದಿಂದ ಸರ್ಕಾರ ಎಸ್.ಐ.ಟಿ ರಚನೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಯೂಟ್ಯೂಬರ್ಸ್ ಮೇಲಿದ್ದ ನಿರ್ಬಂಧವನ್ನು ಕೋರ್ಟ್ ತೆರವು ಮಾಡಿದೆ. ಗೃಹ ಸಚಿವ ಪರಮೇಶ್ವರ್ ಈ ಬಗ್ಗೆ ಇಂದು ಸದನದಲ್ಲಿ ಮಾತನಾಡುತ್ತಾರೆ. ಈ ವಿಚಾರದಲ್ಲಿ ನ್ಯಾಯ ಸಿಗಬೇಕು. ಎಸ್ಐಟಿ ಮಾಡಿದ್ದು, ಷಡ್ಯಂತ್ರ ಅಲ್ಲ ಎಂದು ಡಿಸಿಎಂ ಹೇಳಿದ್ದಾರೆ. ವ್ಯಾಖ್ಯಾನ ಮಾಡುವಾಗ ಒಬ್ಬೊಬ್ಬರು ಒಂದೊಂದು ಹೇಳುತ್ತಾರೆ. ಬರೀ ಧರ್ಮಸ್ಥಳ ವಿಚಾರವಲ್ಲ, ಸಾಮಾನ್ಯ ವ್ಯಕ್ತಿಯ ಮೇಲೆ ಅಪಪ್ರಚಾರ ಆದರೂ ತನಿಖೆ ಮಾಡಬೇಕು. ಸೌಜನ್ಯ ಸಾವಿಗೂ ನ್ಯಾಯ ದೊರಕಬೇಕು. ಎಲುಬಿಲ್ಲದ ನಾಲಿಗೆ, ಏನೇನೋ ಮಾತಾಡುತ್ತಾರೆ. ಧರ್ಮಸ್ಥಳದವರೇ ಎಸ್ ಐಟಿಯನ್ನು ಸ್ವಾಗತಿಸಿದ್ದಾರೆ. ವೀರೇಂದ್ರ ಹೆಗಡೆಯವರನ್ನು ಈ ವಿಚಾರದಲ್ಲಿ ಸಿಲುಕಿಸಲೇಬಾರದು ಎಂದು ಹೇಳಿದ್ದಾರೆ.



















