ಬೆಂಗಳೂರು: ಯಾವುದಾದರೂ ಒಂದು ಕಂಪನಿಯಲ್ಲಿ ಐದಾರು ವರ್ಷ ಕೆಲಸ ಮಾಡಿರ್ತೀವಿ. ಇದಾದ ಬಳಿಕ ಕೆಲಸ ಬಿಟ್ಟು, ನಮ್ಮದೇ ಬಿಸಿನೆಸ್ ಶುರು ಮಾಡಿರ್ತೀವಿ. ಆದರೆ, ನಾವು ಐದಾರು ವರ್ಷ ಕೆಲಸ ಮಾಡಿದ ಕಾರಣ ಪಿಎಫ್ ಖಾತೆಯಲ್ಲಿ ಹಣ ಜಮೆಯಾಗಿರುತ್ತದೆ. ಆದರೆ, ಅದನ್ನು ವಿತ್ ಡ್ರಾ ಮಾಡಬೇಕು ಅಂದರೆ, ಯುಎಎನ್ ಸಂಖ್ಯೆ ಇರೋದಿಲ್ಲ. ಹಾಗಂತ, ಯುಎಎನ್ ನಂಬರ್ ಇಲ್ಲ ಅಂದ ಮಾತ್ರಕ್ಕೆ ಪಿಎಫ್ ಹಣ ಡ್ರಾ ಮಾಡೋದಿಕ್ಕೆ ಆಗೋದಿಲ್ಲ ಅಂತ ಅಲ್ಲ. ಯುಎಎನ್ ನಂಬರ್ ಇಲ್ಲದಿದ್ದರೂ ಪಿಎಫ್ ಹಣವನ್ನು ಡ್ರಾ ಮಾಡಬಹುದು.
ನಿಮ್ಮ ಬಳಿ ಪಿಎಫ್ ಸಂಖ್ಯೆಯೊಂದು ಇದ್ದರೆ ಸಾಕು, ನೀವು ಪಿಎಫ್ ಕಚೇರಿಗೆ ಭೇಟಿ ನೀಡುವ ಮೂಲಕ ಹಣವನ್ನು ಡ್ರಾ ಮಾಡಬಹುದಾಗಿದೆ. ನಿಮ್ಮ ಸ್ಯಾಲರಿ ಸ್ಲಿಪ್ ಅಥವಾ ಫಾರ್ಮ್ 16 ರಲ್ಲಿ ನಿಮ್ಮ ಹಳೆಯ ಪಿಎಫ್ ಸಂಖ್ಯೆ ಇರುತ್ತದೆ. ನಿಮ್ಮ ಕಂಪನಿಯವರು ಈ ನಂಬರ್ ಬಳಸಿ ನಿಮ್ಮ ಪಿಎಫ್ ಖಾತೆಯನ್ನು ಪತ್ತೆಹಚ್ಚಬಹುದು.
ಪಿಎಫ್ ಹಣ ವಿತ್ ಡ್ರಾ ಪ್ರಕ್ರಿಯೆಯನ್ನು ಸುಲಭಗೊಳಿಸಲು ಕಂಪನಿಯಿಂದ ಒಂದು ವೆರಿಫಿಕೇಶನ್ ಪತ್ರ ತೆಗೆದುಕೊಂಡರೆ, ಇಪಿಎಫ್ಒ ಅಧಿಕಾರಿಗಳಿಗೆ ನಿಮ್ಮ ಕ್ಲೇಮ್ ಅನ್ನು ಬೇಗ ಪ್ರಕ್ರಿಯೆಗೊಳಿಸಲು ಸಹಾಯವಾಗುತ್ತದೆ. ಕ್ಲೇಮ್ ಸಲ್ಲಿಸಿದ ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ಹಣ ಜಮೆಯಾಗುತ್ತದೆ.
ನೀಡಬೇಕಾದ ದಾಖಲೆಗಳು ಯಾವವು?
ಕ್ಯಾನ್ಸಲ್ ಮಾಡಿದ ಚೆಕ್ ಅಥವಾ ಪಾಸ್ ಬುಕ್ ಪ್ರತಿ ನೀಡಬೇಕು. ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ವೋಟರ್ ಐಡಿಯಂತಹ ಯಾವುದೇ ಅಧಿಕೃತ ಗುರುತಿನ ಚೀಟಿಯ ಪ್ರತಿ ಬೇಕು. ನೀವು ಕೆಲಸ ಮಾಡಿದ ಕಂಪನಿಯಲ್ಲಿ ನೀವು ಇಷ್ಟು ವರ್ಷ ಕಂಪನಿಯಲ್ಲಿ ಕೆಲಸ ಮಾಡಿದ್ದೀರಿ ಮತ್ತು ನಿಮ್ಮ ಗುರುತನ್ನು ಖಚಿತಪಡಿಸಿ ನಿಮ್ಮ ಉದ್ಯೋಗದಾತರಿಂದ ಒಂದು ದೃಢೀಕರಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.