ಅಜ್ಮೇರ್: ರಾಜಸ್ಥಾನದ ಅಜ್ಮೇರ್‌ನಲ್ಲಿ ಸ್ಥಳೀಯ ಬಿಜೆಪಿ ನಾಯಕರೊಬ್ಬರು ತಮ್ಮ ಪ್ರೇಯಸಿಯ ಕುಮ್ಮಕ್ಕಿನಿಂದ ಪತ್ನಿಯನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆಗಸ್ಟ್ 10 ರಂದು ನಡೆದ ಈ ಕೊಲೆಯನ್ನು, ದರೋಡೆಯ ಕೃತ್ಯವೆಂದು ಬಿಂಬಿಸಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಲಾಗಿತ್ತು. ಆದರೆ, ಈಗ ಆರೋಪಿಗಳಿಬ್ಬರೂ ಸೆರೆಸಿಕ್ಕಿದ್ದು, ಕಂಬಿ ಎಣಿಸುತ್ತಿದ್ದಾರೆ.
ಆಗಸ್ಟ್ 10 ರಂದು ಸಂಜು ಸೈನಿ ಎಂಬ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಅವರ ಪತಿ, ಬಿಜೆಪಿ ನಾಯಕ ರೋಹಿತ್ ಸೈನಿ ಅವರು, ಅಪರಿಚಿತ ದರೋಡೆಕೋರರು ನಮ್ಮ ಮನೆಗೆ ನುಗ್ಗಿ ನನ್ನ ಪತ್ನಿಯನ್ನು ಕೊಂದು ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಆರಂಭದಲ್ಲಿ ಪೊಲೀಸರಿಗೆ ದೂರು ನೀಡಿದ್ದರು.
ಆದರೆ, ತನಿಖೆ ಮುಂದುವರಿಸಿದ ಪೊಲೀಸರಿಗೆ ರೋಹಿತ್ ಹೇಳಿಕೆಗಳಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರು, ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಕೊನೆಗೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು, ಇಡೀ ಸಂಚನ್ನು ಬಾಯ್ಬಿಟ್ಟಿದ್ದಾನೆ.
ರೋಹಿತ್ ಮತ್ತು ಆತನ ಪ್ರೇಯಸಿ ರಿತು ಸೈನಿ ದೀರ್ಘಕಾಲದಿಂದ ಅಕ್ರಮ ಸಂಬಂಧ ಹೊಂದಿದ್ದರು. ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತ್ನಿ ಸಂಜು ಅವರನ್ನು “ಇಲ್ಲವಾಗಿಸುವಂತೆ” ರಿತು ನಿರಂತರವಾಗಿ ರೋಹಿತ್ ಮೇಲೆ ಒತ್ತಡ ಹೇರಿದ್ದಳು. ಪ್ರೇಯಸಿಯ ಮಾತಿಗೆ ಮಣಿದು ರೋಹಿತ್ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಮಾಡಿದ ನಂತರ, ಪೊಲೀಸರ ದಾರಿ ತಪ್ಪಿಸುವ ಉದ್ದೇಶದಿಂದ ರೋಹಿತ್ ದರೋಡೆಯ ನಾಟಕವಾಡಿದ್ದ. ಸದ್ಯ, ಪೊಲೀಸರು ಪ್ರಮುಖ ಆರೋಪಿ ರೋಹಿತ್ ಸೈನಿ ಹಾಗೂ ಆತನ ಪ್ರೇಯಸಿ ರಿತು ಇಬ್ಬರನ್ನೂ ಬಂಧಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.



















