ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಸಿಂಧೂರ ತೆಗೆದವರಿಗೆ ಬುದ್ಧಿ ಕಲಿಸಿದ್ದಾರೆ. ಈ ಧೈರ್ಯ ಕಾಂಗ್ರೆಸ್ ಗೆ ಇತ್ತಾ? ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬೆಯಲ್ಲಿ 187 ಜನ ಸತ್ತಾಗ ಕಾಂಗ್ರೆಸ್ ಆರೋಪಿಗೆ ಬಿರಿಯಾನಿ ಕೊಟ್ಟು ಸಾಕಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಪಾಕ್ ಮೇಲೆ ಯುದ್ಧ ಮಾಡಿ ಬುದ್ಧಿ ಕಲಿಸಿದ್ದಾರೆ. ನೂರಾರು ಮಂದಿ ಪಾಕಿಸ್ತಾನದ ಸೈನಿಕರನ್ನು ಬಲಿ ಪಡೆದಿದ್ದಾರೆ. ಕಾಂಗ್ರೆಸ್ ಗೆ ಆ ಧಮ್ ಇದೆಯಾ? ಪಾಕಿಸ್ತಾನ ಮತ್ತು ಮುಸ್ಲಿಂ ಅಂದರೆ ಪಾದಕ್ಕೆ ಬೀಳುವುದೇ ಕಾಂಗ್ರೆಸ್ ಆಗಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ದೇಶ ಹಾಗೂ ಧರ್ಮದ ಬಗ್ಗೆ ಕಾಳಜಿ ಇರಲಿ. ಪಾಕಿಸ್ತಾನದವರು ಸತ್ತರೆ ಕಾಂಗ್ರೆಸ್ ಕಣ್ಣಿರು ಹಾಕುತ್ತೆ. ಭಾರತೀಯರು ಸತ್ತಾಗ ಪ್ರತೀಕಾರ ತೀರಿಸಿಕೊಳ್ಳುವುದೇ ಬಿಜೆಪಿಯ ಗುಣ. ಆದರೆ ಕಾಂಗ್ರೆಸ್ ಹೇಡಿಗಳ ರೀತಿ ವರ್ತಿಸುತ್ತದೆ ಎಂದಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅನಾಮಿಕ ವ್ಯಕ್ತಿಯೋರ್ವ ನೂರಾರು ಹೆಣ ಹೂತಿರುವುದಾಗಿ ಹೇಳಿದ್ದಕ್ಕೆ ಎಸ್ ಐಟಿ ರಚನೆ ಮಾಡಿದ್ದಾರೆ. ಇದರಿಂದಾಗಿ ಸುಮಾರು 20 ದಿನಗಳಿಂದಲೂ ಧರ್ಮಸ್ಥಳ ಅವಹೇಳನ ಮಾಡುವ ಕೆಲಸ ನಡೆಯಿತು. ಆದರೆ, ಅಲ್ಲಿ ಏನೂ ಸಿಕ್ಕಿಲ್ಲ. ಸುಖಾಸುಮ್ಮನೆ ಸರ್ಕಾರದ ಹಣ ಪೋಲು ಮಾಡಲಾಯಿತು. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬ ವಿಷಯ ಬೆಳಕಿಗೆ ಬರಲೇಬೇಕು.
ನಮ್ಮ ಸರ್ಕಾರ ಇದ್ದಾಗಲೂ ಆರೋಪ ಕೇಳಿ ಬಂದಿತ್ತು. ಸೌಜನ್ಯ ಕೇಸ್ CBI ತನಿಖೆಗೆ ಬೇಕಾದರೆ ನೀಡಲಿ. ಈ ಹೆಸರಿನಲ್ಲಿ ಮಂಜುನಾಥನಿಗೆ ಅವಮಾನ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.