ನವದೆಹಲಿ: ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಬಳಕೆದಾರರಿಗೆ ಪ್ರಮುಖ ಬದಲಾವಣೆಯೊಂದು ಜಾರಿಗೆ ಬರಲಿದೆ. ಸೈಬರ್ ವಂಚನೆ ಮತ್ತು ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ, ಅಕ್ಟೋಬರ್ 1ರಿಂದ ವ್ಯಕ್ತಿ-ವ್ಯಕ್ತಿ (P2P) ನಡುವಿನ ‘ಹಣ ವಿನಂತಿ’ (Money Request) ಅಥವಾ ‘ಕಲೆಕ್ಟ್’ ಫೀಚರ್ ನಿಷ್ಕ್ರಿಯಗೊಳಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NCPI) ನಿರ್ಧರಿಸಿದೆ.
‘ಮನಿ ರಿಕ್ವೆಸ್ಟ್’ ವೈಶಿಷ್ಟ್ಯವು ಸೈಬರ್ ವಂಚಕರಿಗೆ ಸುಲಭ ಮಾರ್ಗವಾಗಿ ಪರಿಣಮಿಸಿತ್ತು. ನಕಲಿ ‘ಕಲೆಕ್ಟ್’ ವಿನಂತಿಗಳನ್ನು ಕಳುಹಿಸುವ ಮೂಲಕ, ಅಜಾಗರೂಕ ಬಳಕೆದಾರರನ್ನು ಗುರಿಯಾಗಿಸಿಕೊಂಡು ಅವರ ಖಾತೆಗಳಿಂದ ಹಣವನ್ನು ವರ್ಗಾಯಿಸಿಕೊಳ್ಳುತ್ತಿದ್ದರು. ಅನೇಕ ಬಳಕೆದಾರರು, ಹಣವನ್ನು ಸ್ವೀಕರಿಸುತ್ತಿದ್ದೇವೆ ಎಂದು ಭಾವಿಸಿ, ಅರಿವಿಲ್ಲದೆ ವಂಚಕರ ಖಾತೆಗಳಿಗೆ ಹಣ ವರ್ಗಾವಣೆಯನ್ನು ಅನುಮೋದಿಸುತ್ತಿದ್ದರು. ಈ ಲೋಪದೋಷವನ್ನು ತಡೆಯುವ ಸಲುವಾಗಿ NPCI ಈ ನಿರ್ಧಾರ ಕೈಗೊಂಡಿದೆ.
ಅಕ್ಟೋಬರ್ 2 ರಿಂದ, ಯಾವುದೇ P2P ಕಲೆಕ್ಟ್ ವಹಿವಾಟುಗಳನ್ನು ಪ್ರಾರಂಭಿಸಬಾರದು ಅಥವಾ ಪ್ರಕ್ರಿಯೆಗೊಳಿಸಬಾರದು ಎಂದು ಎನ್ಸಿಪಿಐ ಬ್ಯಾಂಕುಗಳು, ಪಾವತಿ ಸೇವಾ ಪೂರೈಕೆದಾರರು ಮತ್ತು ಯುಪಿಐ ಅಪ್ಲಿಕೇಶನ್‌ಗಳಿಗೆ ಸೂಚನೆ ನೀಡಿದೆ. ಇಂತಹ ವಿನಂತಿಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲು ವ್ಯವಸ್ಥೆಗಳನ್ನು ನವೀಕರಿಸುವಂತೆ ತಿಳಿಸಲಾಗಿದೆ.
ಇದರ ಅರ್ಥವೇನು?
ಈ ಬದಲಾವಣೆಯು ಯುಪಿಐ ಬಳಕೆಯನ್ನು ಕಷ್ಟಕರವಾಗಿಸುವುದಿಲ್ಲ. ಹೆಚ್ಚಿನ ಫೀಚರ್ಗಳು ಹಾಗೆಯೇ ಇರುತ್ತವೆ. ಬಳಕೆದಾರರು ಈಗಲೂ ಯುಪಿಐ ID, ಮೊಬೈಲ್ ಸಂಖ್ಯೆ ಅಥವಾ ಬ್ಯಾಂಕ್ ವಿವರಗಳನ್ನು ಬಳಸಿಕೊಂಡು ತಕ್ಷಣವೇ ಹಣವನ್ನು ಕಳುಹಿಸಬಹುದು ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಪಾವತಿ ಮಾಡಬಹುದು. ಈ ಬದಲಾವಣೆ ಕೇವಲ ವ್ಯಕ್ತಿ-ವ್ಯಕ್ತಿ ಹಣ ವಿನಂತಿಗಳಿಗೆ ಮಾತ್ರ ಅನ್ವಯಿಸುತ್ತದೆ. ವ್ಯಾಪಾರಿಗಳಿಂದ (Merchants) ಬರುವ ‘ಕಲೆಕ್ಟ್’ ವಿನಂತಿಗಳು ಮತ್ತು ಅವುಗಳ ಅಸ್ತಿತ್ವದಲ್ಲಿರುವ ವಹಿವಾಟು ಮಿತಿಗಳು ಹಾಗೆಯೇ ಮುಂದುವರಿಯುತ್ತವೆ.
ಸುರಕ್ಷತೆಗೆ ಹೆಚ್ಚಿನ ಆದ್ಯತೆ
ಸೈಬರ್ ವಂಚನೆಗಳನ್ನು ತಡೆಗಟ್ಟುವುದು ಮತ್ತು ಯುಪಿಐ ಮೇಲಿನ ಬಳಕೆದಾರರ ನಂಬಿಕೆಯನ್ನು ಬಲಪಡಿಸುವುದು ಈ ಕ್ರಮದ ಉದ್ದೇಶವಾಗಿದೆ. ಇದು ವಂಚನೆಗಳ ಸಮಸ್ಯೆ ಹೆಚ್ಚಾಗುವ ಮೊದಲು ತೆಗೆದುಕೊಳ್ಳುತ್ತಿರುವ ಮುನ್ನೆಚ್ಚರಿಕೆ ಕ್ರಮವಾಗಿದೆ.
ನಿಜವಾದ ಬಳಕೆದಾರರಿಗೆ, ‘ಮನಿ ರಿಕ್ವೆಸ್ಟ್’ ವೈಶಿಷ್ಟ್ಯದ ಅನುಪಸ್ಥಿತಿಯು ಒಂದು ಸಣ್ಣ ಅನಾನುಕೂಲತೆ ಉಂಟುಮಾಡಬಹುದು. ವಿನಂತಿಯನ್ನು ಕಳುಹಿಸುವ ಬದಲು, ನಿಮ್ಮ ಯುಪಿಐ ID ಅಥವಾ QR ಕೋಡ್ ಅನ್ನು ಹಂಚಿಕೊಳ್ಳುವ ಮೂಲಕ ಹಣವನ್ನು ಕೇಳಬೇಕಾಗುತ್ತದೆ. ಇದು ಸ್ವಲ್ಪ ಅನಾನುಕೂಲವೆನಿಸಬಹುದು, ಆದರೆ ಇದು ವಂಚಕರು ಜನರನ್ನು ಮೋಸಗೊಳಿಸುವ ಅವಕಾಶಗಳನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಭವಿಷ್ಯದಲ್ಲಿ ಯುಪಿಐ ಮತ್ತಷ್ಟು ಸುರಕ್ಷಿತವಾಗಲಿದ್ದು, ಪ್ರತಿಯೊಂದು ವಹಿವಾಟು ಸಹ ಸುಭದ್ರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಎನ್ಸಿಪಿಐ ಪ್ರಯತ್ನಿಸುತ್ತಿದೆ.



















