ನವದೆಹಲಿ: 2025ರ ಏಷ್ಯಾ ಕಪ್ ಟೂರ್ನಿಗೆ ಭಾರತ ತಂಡದ ಘೋಷಣೆಗೆ ದಿನಗಣನೆ ಆರಂಭವಾಗಿರುವಾಗಲೇ, ಕೇರಳದ ಸ್ಫೋಟಕ ಬ್ಯಾಟರ್ ಸಂಜು ಸ್ಯಾಮ್ಸನ್ ಭರ್ಜರಿ ಫಾರ್ಮ್‌ಗೆ ಮರಳಿದ್ದಾರೆ. ತಿರುವನಂತಪುರದಲ್ಲಿ ನಡೆದಿದ್ದ ಕೆಸಿಎ ಕಾರ್ಯದರ್ಶಿ XI ಪರ ಭರ್ಜರಿ ಅರ್ಧಶತಕ ಬಾರಿಸುವ ಮೂಲಕ ಅವರು ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಪಡೆಯಲು ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ.
ಆಗಸ್ಟ್ 15ರಂದು ಕೆಸಿಎ ಅಧ್ಯಕ್ಷರ ಇಲೆವೆನ್ ವಿರುದ್ಧ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್, ಕೇವಲ 36 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನೊಂದಿಗೆ 54 ರನ್ ಗಳಿಸಿದರು. ಇದು ಅವರ ತಂಡಕ್ಕೆ ಗೆಲುವು ತಂದುಕೊಟ್ಟಿತು. ಕೆಸಿಎ ಕಾರ್ಯದರ್ಶಿ XI ಪರ ನಾಯಕನಾಗಿ ಆಡಿದ ಸ್ಯಾಮ್ಸನ್ ಅವರ ಈ ‘ಮ್ಯಾಚ್ ವಿನ್ನಿಂಗ್ ಇನಿಂಗ್ಸ್’ ಎಲ್ಲರ ಗಮನ ಸೆಳೆದಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಸಿಎ ಅಧ್ಯಕ್ಷರ ತಂಡ, 8 ವಿಕೆಟ್ ನಷ್ಟಕ್ಕೆ 184 ರನ್ ಕಲೆಹಾಕಿ ಸವಾಲಿನ ಮೊತ್ತ ನೀಡಿತು. ಇದಕ್ಕೆ ಪ್ರತಿಯಾಗಿ, ಕಾರ್ಯದರ್ಶಿ XI ಪರ ವಿಷ್ಣು ವಿನೋದ್ (69 ರನ್) ಉತ್ತಮ ಅಡಿಪಾಯ ಹಾಕಿದರು, ನಂತರ ಸಂಜು ಸ್ಯಾಮ್ಸನ್ ಜವಾಬ್ದಾರಿಯುತ ಆಟ ಪ್ರದರ್ಶಿಸಿ, ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಆರಂಭಿಕರ ಸ್ಥಾನಕ್ಕೆ ಭಾರಿ ಪೈಪೋಟಿ
ಮುಂಬರುವ ಏಷ್ಯಾ ಕಪ್‌ಗೆ ಭಾರತ ತಂಡಕ್ಕೆ ಆರಂಭಿಕ ಆಟಗಾರರನ್ನು ಆಯ್ಕೆ ಮಾಡುವುದು ಆಯ್ಕೆ ಸಮಿತಿಗೆ ದೊಡ್ಡ ಸವಾಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಭಿಷೇಕ್ ಶರ್ಮಾ, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಅವರಂತಹ ಹಲವು ಪ್ರಮುಖ ಆಯ್ಕೆಗಳಿವೆ.
ಆಯ್ಕೆ ಸಮಿತಿ ಗೊಂದಲದಲ್ಲಿರಲು ಕಾರಣವೆಂದರೆ, ಅಭಿಷೇಕ್ ಮತ್ತು ಜೈಸ್ವಾಲ್ ಅವರ ಸ್ಪೋಟಕ ಆರಂಭಿಕ ಆಟ, ಸಂಜು ಸ್ಯಾಮ್ಸನ್ ಅವರ ಚಮತ್ಕಾರಿ ವಿಕೆಟ್ ಕೀಪಿಂಗ್ ಸಾಮರ್ಥ್ಯ, ಗಿಲ್ ಮತ್ತು ಸಾಯಿ ಸುದರ್ಶನ್ ಅವರ ಸ್ಥಿರವಾದ ಬ್ಯಾಟಿಂಗ್ – ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಯಾರನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸುವುದು ಕಷ್ಟವಾಗಿದೆ. ಆಗಸ್ಟ್ 19 ಅಥವಾ 20 ರಂದು ಮುಂಬೈನಲ್ಲಿ ತಂಡವನ್ನು ಘೋಷಿಸುವುದರೊಂದಿಗೆ ಈ ಗೊಂದಲಗಳಿಗೆ ತೆರೆ ಬೀಳುವ ಸಾಧ್ಯತೆ ಇದೆ.
ಹರ್ಭಜನ್ ಸಿಂಗ್ ಅವರ ತಂಡದಲ್ಲಿ ಸ್ಯಾಮ್ಸನ್‌ಗೆ ಸ್ಥಾನವಿಲ್ಲ
ಏಷ್ಯಾ ಕಪ್‌ಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ತಮ್ಮ ಸಂಭಾವ್ಯ ತಂಡವನ್ನು ಆಯ್ಕೆ ಮಾಡಿದ್ದು, ಅಲ್ಲಿ ಅವರು ಸಂಜು ಸ್ಯಾಮ್ಸನ್‌ಗೆ ಸ್ಥಾನ ನೀಡಿಲ್ಲ. ಹರ್ಭಜನ್ ಅವರ ಪಟ್ಟಿಯಲ್ಲಿ ಶುಭಮನ್ ಗಿಲ್ ಇದ್ದಾರೆ.
ಭಾರತದ ಪರ 42 ಟಿ20ಐ ಪಂದ್ಯಗಳನ್ನು ಆಡಿರುವ ಸಂಜು ಸ್ಯಾಮ್ಸನ್, 25.32ರ ಸರಾಸರಿಯಲ್ಲಿ 861 ರನ್ ಮತ್ತು 152.38 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಈ ಅಂಕಿಅಂಶಗಳು ಉತ್ತಮವಾಗಿದ್ದರೂ, ಪ್ರಸ್ತುತ ಇರುವ ತೀವ್ರ ಪೈಪೋಟಿಯಲ್ಲಿ ಏಷ್ಯಾ ಕಪ್ ತಂಡದಲ್ಲಿ ಅವರಿಗೆ ಸ್ಥಾನ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.