ಹುಬ್ಬಳ್ಳಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈ ಕೂಡಲೇ ಅಧಿವೇಶನದಲ್ಲಿ ಮಧ್ಯಂತರ ವರದಿ ಮಂಡಿಸಬೇಕು ಹಾಗೂ ತಕ್ಷಣ ಸಾಕ್ಷಿ ದೂರುದಾರನನ್ನು ಬಂಧಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಇಂದು (ಶನಿವಾರ, ಆ.16) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೋಶಿ, ಈ ಪ್ರಕರಣಕ್ಕೆ ಸಂಬಂಧಿಸಿ ಡಿಸಿಎಂ ಅವರೇ ಷಡ್ಯಂತ್ರ ನಡೆದಿದೆ ಎಂದು ಹೇಳಿದ್ದಾರೆ. ಹಾಗಾದರೆ ಇದರಲ್ಲಿ ಗೃಹ ಇಲಾಖೆಯ ವೈಫಲ್ಯ ಇದೆಯೇ ಅಥವಾ ಖುದ್ದು ಸಿಎಂ ನಿಂತು ತನಿಖೆ ನಡೆಸುತ್ತಿದ್ದಾರೆಂದು ಡಿಕೆಶಿ ಹೇಳುತ್ತಿದ್ದಾರೆಯೇ ಎಂದು ಕುಟುಕಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ಬಹುಸಂಖ್ಯಾತ ಹಿಂದೂಗಳ ಭಾವನೆ, ಧಾರ್ಮಿಕ ಅಸ್ಮಿತೆಗೆ ವ್ಯವಸ್ಥಿತವಾಗಿ ಧಕ್ಕೆ ತರುವಂತಹ ಕೆಲಸ ಮತ್ತು ಹಿಂದೂಗಳ ಧಾರ್ಮಿಕ ಭಾವನೆಯನ್ನು ಕುಗ್ಗಿಸುವಂತೆ ಮಾಡುವ ಹುನ್ನಾರದಿಂದಲೇ ಎಸ್‌ಐಟಿ ತನಿಖೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಪೊಲೀಸರು ಇದುವರೆಗೆ ಸಾಕ್ಷಿ ದೂರುದಾರನನ್ನು ಯಾಕೆ ಬಂಧಿಸಿಲ್ಲ. ಅವನ ಪೂರ್ವಾಪರ ತನಿಖೆ ನಡೆಸಬೇಕು. ಅಲ್ಲದೆ ಆತನ ಜಾತಿ, ಧರ್ಮ ವಿಚಾರಿಸಬೇಕು. ಆತ ಬೇರೆ ಧರ್ಮದವನಾಗಿದ್ದರೆ ಹಿಂದೂಗಳ ಧಾರ್ಮಿಕ ಭಾವನೆಗಳ ಜೊತೆ ಚೆಲ್ಲಾಟ ಮಾಡಿದಂತಾಗುತ್ತದೆ ಎಂದು ಹರಿಹಾಯ್ದಿದ್ದಾರೆ.


















