ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರಿಂಕೋರ್ಟ್ ದರ್ಶನ್ ಸೇರಿ ಏಳೂ ಆರೋಪಿಗಳ ಜಾಮೀನು ರದ್ದುಗೊಳಿಸಿ ಆದೇಶಿಸಿದೆ.
ಈ ಸಂಬಂಧಿಸಿದಂತೆ ಚಂದನವನದ ಮೋಹಕತಾರೆ ನಟಿ ರಮ್ಯಾ, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಿದೆ ಎಂದು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ದರ್ಶನ್ ಮತ್ತೆ ಜೈಲು ಸೇರಿದ ಮೇಲೆ ರಮ್ಯಾ ಅನುಕಂಪ ವ್ಯಕ್ತಪಡಿಸಿದ್ಧಾರೆ.
ಈ ಸಂಬಂಧಿಸಿದಂತೆ ಫೋನ್ ಸಂಭಾಷನೆಯಲ್ಲಿ ಮಾತಾಡಿದ್ದಾರೆ ಎನ್ನಲಾದ ಆಡಿಯೋ ಲಭ್ಯವಾಗಿದ್ದು, ಆ ಆಡಿಯೋದಲ್ಲಿ ದರ್ಶನ್ ಬಗ್ಗೆ ರಮ್ಯಾ ಕನಿಕರ ವ್ಯಕ್ತಪಡಿಸಿದ್ದಾರೆ.
ದರ್ಶನ್ ಜೊತೆಗಿನ ಗೆಳತನವನ್ನು ಮೋಹಕ ತಾರೆ ನೆನೆದಿದ್ದಾರೆ. ಹಳೆಯ ದಿನಗಳು ಚೆನ್ನಾಗಿದ್ದವು. ದರ್ಶನ್ ಸಿನೆಮಾ ಇಂಡಸ್ಟ್ರಿಗೆ ಲೈಟ್ ಮ್ಯಾನ್ ಆಗಿ ಬಂದು ಬೆಳೆದರು. ನಾನು ಅವರ ಜೊತೆ ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ದರ್ಶನ್ ಬಂಧನಕ್ಕೊಳಗಾದಾಗ ಮಿಶ್ರ ಪ್ರತಿಕ್ರಿಯೆ ಬಂತು. ಒಂದು ಕಡೆ ಬೇಸರವೂ ಆಯ್ತು. ಅವರು ಸಿನಿಮಾ ಇಂಡಸ್ಟ್ರಿಗೆ ಬಂದ ವಿಚಾರವನ್ನು ನನ್ನ ಜೊತೆ ಹಂಚಿಕೊಂಡಿದ್ದರು. ಆದರೇ, ಈಗ ಅವರೇ ಅವರ ಜೀವನ ಹಾಳು ಮಾಡಿಕೊಂಡಿದ್ದಾರೆ ಎಂದು ದರ್ಶನ್ ಬಗ್ಗೆ ರಮ್ಯಾ ಹೇಳಿದ್ದಾರೆ.
ಇದೇ ವೇಳೆ ಪವಿತ್ರಗೌಡ ಬಗ್ಗೆಯೂ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ. ಪವಿತ್ರಗೌಡ ನನಗೆ ಯಾರೆಂದು ಗೊತ್ತಿರಲಿಲ್ಲ. ಈ ಪ್ರಕರಣ ಬೆಳಕಿಗೆ ಬಂದ ಮೇಲೆ ಗೊತ್ತಾಗಿದ್ದು. ಅವರು ಒಬ್ಬ ತಾಯಿ, ಅವರಿಗೆ ಮಗಳಿದ್ದಾಳೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕಿಂತ ನಿಯಮಗಳ ಪ್ರಕಾರ ನಡೆದುಕೊಂಡಿದ್ದರೇ, ಈ ರೀತಿ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದು ರಮ್ಯಾ ಹೇಳಿದ್ದಲ್ಲದೇ, ಸುಪ್ರೀಂ ಕೋರ್ಟ್ ಆದೇಶದಿಂದ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ದೊರಕಿದೆ ಎಂದು ರಮ್ಯಾ ಫೋನ್ ಸಂಭಾಷಣೆಯಲ್ಲಿ ಹೇಳಿದ್ದಾರೆ.



















