ಬೆಂಗಳೂರು: ಧರ್ಮಸ್ಥಳದಲ್ಲಿ ಅಸಹಜ ಸಾವಿಗೀಡಾದ ಮೃತದೇಹಗಳನ್ನು ಅಲ್ಲಿನ ʼಪ್ರಭಾವಿʼ ವ್ಯಕ್ತಿಯ ಸೂಚನೆಯಂತೆ ಹೂತಿರುವುದಾಗಿ ಸಾಕ್ಷಿ ದೂರುದಾರ ನೀಡಿರುವ ದೂರಿನ ಮೇಲೆ ಎಸ್.ಐ.ಟಿ ತನಿಖೆ ನಡೆಸುತ್ತಿದೆ. ಈ ನಡುವೆ ಇಂತಹ ಪ್ರಕರಣ ಧರ್ಮಸ್ಥಳದಲ್ಲಿ ನಡೆದಿಲ್ಲ, ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಶ್ರೀಕ್ಷೇತ್ರ ಧರ್ಮಸ್ಥಳದ ಅಪಪ್ರಚಾರ, ಷಡ್ಯಂತ್ರ ದೂರವಾಗಿ, ಕ್ಷೇತ್ರದ ಶ್ರದ್ದೆಭಕ್ತಿ ವೃದ್ಧಿಸಲಿ ಎಂಬ ಸಂಕಲ್ಪದೊಂದಿಗೆ ರಾಜ್ಯದಾದ್ಯಂತ 18 ಆಗಸ್ಟ್ 2025 ಸೋಮವಾರದಿಂದ ಒಂದು ವಾರದ ಕಾಲ ಸಾಮೂಹಿಕ ಶಿವಪಂಚಾಕ್ಷರಿ “ಓಂ ನಮಃ ಶಿವಾಯ” ನಾಮ ಜಪ ಪಠಿಸಲು ವಿಶ್ವ ಹಿಂದೂ ಪರಿಷತ್ ಕರೆ ಕೊಟ್ಟಿದೆ.
ಧರ್ಮಸ್ಥಳದ ಶ್ರೀ ಮಂಜುನಾಥನ ಶ್ರೀಕ್ಷೇತ್ರ ಕಳೆದ ಹಲವು ದಶಕಗಳಿಂದ ಸಹಸ್ರಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ, ನೂರಾರು ಧಾರ್ಮಿಕ ಕ್ಷೇತ್ರಗಳನ್ನು ಜೀರ್ಣೋದ್ದಾರಗೊಳಿಸುವ ಪವಿತ್ರ ಕಾರ್ಯವನ್ನು ಮಾಡಿಕೊಂಡು ಬಂದಿದೆ. ಜೊತೆಗೆ ಕ್ಷೇತ್ರದಲ್ಲಿ ನಿರಂತರ ಅನ್ನದಾನದ ಪುಣ್ಯ ಕಾರ್ಯ ಮಾಡುತ್ತಿದೆ. ರಾಜ್ಯ ದೇಶ ವಿದೇಶಗಳಿಂದ ಕೋಟ್ಯಂತರ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶಿವನ ದರ್ಶನ ಪಡೆದು ಧನ್ಯರಾಗುತ್ತಾರೆ. ನೂರಾರು ವರ್ಷಗಳ ಪರಂಪರೆ ಇರುವ ಒಂದು ನಂಬಿಕೆಯ ಶ್ರದ್ಧಾಕೇಂದ್ರವನ್ನು ಇಂದು ಧರ್ಮ ವಿರೋಧಿ ಶಕ್ತಿಗಳು ವ್ಯಾಪಕವಾಗಿ ಷಡ್ಯಂತ್ರ ಮಾಡಿ ಅಪಪ್ರಚಾರವೆಸಗುವ ಮೂಲಕ ಕ್ಷೇತ್ರಕ್ಕೆ ಕೆಟ್ಟ ಹೆಸರು ತರುವ ಸಂಚು ನಡೆಸುತ್ತಿದ್ದಾರೆ.
ರಾಜ್ಯದ ಎಲ್ಲಾ ಹಿಂದೂ ಸಂಘಟನೆಗಳು, ಧಾರ್ಮಿಕ ಸಂಘಸಂಸ್ಥೆಗಳು ಹಾಗೂ ಮಠ ಮಂದಿರ, ಭಜನಾಮಂದಿರ, ದೇವಸ್ಥಾನ, ದೈವಸ್ಥಾನಗಳಲ್ಲಿ ಸಾಮೂಹಿಕವಾಗಿಯೂ ಮತ್ತು ಮನೆ ಮನೆಗಳಲ್ಲಿ ವೈಯುಕ್ತಿಕವಾಗಿಯೂ ಶಿವಪಂಚಾಕ್ಷರಿ ಮಂತ್ರದ ಓಂ ನಮಃ ಶಿವಾಯ ನಾಮ ಜಪ ಮಾಡುವಂತೆ ಸರ್ವ ಭಕ್ತರಲ್ಲಿ ವಿನಂತಿ ಮಾಡುತ್ತೇವೆ ಎಂದು ವಿಹೆಚ್‌ಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.



















