ಕೋಲಾರ : ಉಸ್ತುವಾರಿ ಸಚಿವರ ಎದುರೇ ಕಾಂಗ್ರೆಸ್ ನ ಎರಡು ಬಣಗಳ ಮುಂಖಡರು ಕೈಕೈ ಮಿಲಾಯಿಸಲು ಮುಂದಾದ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ನಗರದ ಕಾಲೇಜು ಸರ್ಕಲ್ ಬಳಿಯ ನೂತನ ಫುಡ್ ಕೋರ್ಟ್ ಉದ್ಘಾಟನೆಗೆ ಬಂದಿದ್ದ ಉಸ್ತುವಾರಿ ಸಚಿವ ಭೈರತಿ ಸುರೇಶ್ ಮುಂದೆಯೇ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಕೆ.ಎಚ್ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣದ ಮುಖಂಡರ ನಡುವೆ ಪರಸ್ಪರ ವಾಗ್ವಾದ ನಡೆದಿದೆ.
ನೂತನ ಫುಡ್ ಕೋರ್ಟ್ ಉದ್ಘಾಟನೆ ಮಾಡುತ್ತಿದ್ದಂತೆ ಜಗಳ ಆರಂಭವಾಗಿದೆ. ಇದು ಬೆಂಗಳೂರು ಪೂರ್ವ ಡಿಸಿಪಿ ದೇವರಾಜ್ ಅವರಿಗೆ ಸಂಬಂಧಿಸಿದ ಫುಡ್ ಕೋರ್ಟ್, ನಗರಸಭೆಯಿಂದ ಹೇಗೆ ಉದ್ಘಾಟನೆ ಮಾಡಿಸುತ್ತೀರಾ ಎಂದು ಕೆ.ಎಚ್ ಮುನಿಯಪ್ಪ ಬಣದ ಮುಖಂಡರಿಂದ ಸಚಿವರಿಗೆ ಪ್ರಶ್ನೆ ಮಾಡಿದ್ದಾರೆ. ಇದು ಸಿಎಸ್ ಆರ್ ಹಣದಿಂದ ಮಾಡಿರುವ ಫುಡ್ ಕೋರ್ಟ್ ಎಂದು ಕೊತ್ತೂರು ಮಂಜುನಾಥ್ ಪ್ರತಿಕ್ರಿಯಿಸಿದ್ದಾರೆ.
ಈ ವೇಳೆ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಮಾತನಾಡಿದ ಕೆ.ಎಚ್ ಮುನಿಯಪ್ಪ ಬಣದ ಮುಖಂಡ ಮಾಜಿ ನಗರಸಭೆ ಸದಸ್ಯ ಸೋಮಶೇಖರ್, ವಾಗ್ವಾದಕ್ಕೆ ಇಳಿದಿದ್ದಾರೆ, ಆ ಸಂದರ್ಭದಲ್ಲಿ ಉಭಯ ಬಣಗಳ ನಡುವಿನ ವಾಕ್ಸಮರ ತಾರಕಕ್ಕೆ ಏರಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು.
ಈ ನಡುವೆ ಸಚಿವ ಭೈರತಿ ಸುರೇಶ್ ಮಧ್ಯಪ್ರವೇಶ ಮಾಡಿ ಉಭಯ ಬಣಗಳ ವಾಕ್ಸಮರವನ್ನು ತಿಳಿಗೊಳಿಸಿದ್ದಾರೆ.