ಧರ್ಮಸ್ಥಳ : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಆರೋಪ ಮಾಡಿದ್ದ ಸಾಕ್ಷಿ ದೂರುದಾರ ಈಗ ರಾಷ್ಟ್ರೀಯ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ಕೊಟ್ಟಿದ್ದು, ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾನೆ.
“ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ನೇರವಾಗಿ ದೇವಾಲಯದ ಮಾಹಿತಿ ಕೇಂದ್ರದಿಂದ ನನಗೆ ಶವಗಳನ್ನು ಹೂಳಲು ಸೂಚನೆಗಳು ಬರುತ್ತಿದ್ದವು. ನಮಗೆ ಪಂಚಾಯತ್‌ನಿಂದ ಎಂದಿಗೂ ಆದೇಶಗಳು ಬಂದಿಲ್ಲ. ಏನು ಮಾಡಬೇಕೆಂದು ಯಾವಾಗಲೂ ದೇವಾಲಯದ ಮಾಹಿತಿ ಕೇಂದ್ರವೇ ನಮಗೆ ಹೇಳುತ್ತಿತ್ತು” ಎಂದು ಆತ ಹೇಳಿಕೊಂಡಿರುವುದು ಮತ್ತಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ರಾಷ್ಟ್ರೀಯ ಸುದ್ದಿ ಸಂಸ್ಥೆ ಇಂಡಿಯಾ ಟುಡೇ ವಾಹಿನಿಗೆ ಈ ಅನಾಮಿಕ ದೂರುದಾರ ಸಂದರ್ಶನ ನೀಡಿದ್ದಾನೆ. ಇಂಡಿಯಾ ಟುಡೇ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಸಂದರ್ಶನದ ಪ್ರಮುಖಾಂಶ ಇಲ್ಲಿದೆ.
ಒಂದು ಕಾಲದಲ್ಲಿ ಧರ್ಮಸ್ಥಳ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಸಾಕ್ಷಿ ದೂರುದಾರ, ತಾನು ಮತ್ತು ಒಂದು ಸಣ್ಣ ತಂಡವು ಯಾವುದೇ ಅಧಿಕೃತ ಮೇಲ್ವಿಚಾರಣೆ ಅಥವಾ ದಾಖಲೆಗಳಿಲ್ಲದೆ ಅರಣ್ಯ ಪ್ರದೇಶಗಳಲ್ಲಿ ಹಲವಾರು ಗುರುತಿಸಲಾಗದ ಶವಗಳನ್ನು ತನ್ನ ಸಹಚರರೊಂದಿಗೆ ಹೂತು ಹಾಕಿದ್ದೇವೆ ಎಂದು ಹೇಳಿಕೊಂಡಿದ್ದಾನೆ.
“ಕಾಡು, ನದಿದಂಡೆಯಲ್ಲಿ ಸಮಾಧಿಗಳು”
ಶವಗಳನ್ನು ತಾನೊಬ್ಬನೇ ಸಮಾಧಿ ಮಾಡುತ್ತಿರಲಿಲ್ಲ, ತನ್ನ ಜತೆಗೆ ನಾಲ್ಕು ಜನರ ತಂಡವಿತ್ತು ಎಂದು ಹೇಳಿದ್ದಾನೆ. “ಅಲ್ಲಿ ಯಾವುದೇ ಸ್ಮಶಾನವಿರಲಿಲ್ಲ. ನಾವು ಕಾಡುಗಳಲ್ಲಿ, ಹಳೆಯ ರಸ್ತೆಗಳಲ್ಲಿ, ನದಿ ದಂಡೆಯ ಪಕ್ಕದಲ್ಲಿ ಹೂತು ಹಾಕಿದ್ದೇವೆ” ಎಂದು ಹೇಳಿಕೊಂಡಿದ್ದಾನೆ.
“ಬಾಹುಬಲಿ ಬೆಟ್ಟದಲ್ಲಿ ನಾವು ಮಹಿಳೆಯೊಬ್ಬರನ್ನು ಹೂತು ಹಾಕಿದ್ದೇವೆ. ನೇತ್ರಾವತಿ ಸ್ನಾನ ಘಟ್ಟದಲ್ಲಿ ಸುಮಾರು 70-80 ಶವಗಳನ್ನು ಹೂತಿದ್ದೇವೆ” ಎಂದು ಹೇಳಿಕೊಂಡಿದ್ದಾನೆ.
ಆತ ಗುರುತಿಸಿದ್ದ ಸ್ಪಾಟ್ ಸಂಖ್ಯೆ 13ರಲ್ಲಿ ಸುಮಾರು 70ರಿಂದ 80 ಶವಗಳನ್ನು ಹೂತಿದ್ದೇವೆ ಎಂದು ದೂರುದಾರ ಸಂದರ್ಶನದಲ್ಲಿ ಹೇಳಿದ್ದಾನೆ. ಸ್ಥಳೀಯರು ಕೆಲವೊಮ್ಮೆ ಇವರು ಶವಗಳನ್ನು ಹೂಳುವುದನ್ನು ನೋಡಿದ್ದಾರೆ. ಆದರೆ, ಎಂದಿಗೂ ಮಧ್ಯಪ್ರವೇಶಿಸಲಿಲ್ಲ ಎಂದು ಆತ ಹೇಳಿದ್ದಾನೆ. “ಜನರು ನಮ್ಮನ್ನು ನೋಡಿದರು, ಆದರೆ ಅವರಿಗೆ ಯಾವುದೇ ತೊಂದರೆ ಇರಲಿಲ್ಲ. ನಮಗೆ ಆದೇಶಗಳು ಬರುತ್ತಿದ್ದವು, ನಾವು ಶವಗಳನ್ನು ಹೂಳಿದೆವು. ಅದು ನಮ್ಮ ಕೆಲಸವಾಗಿತ್ತು” ಎಂದಿದ್ದಾನೆ.


















